ಸುಳ್ಯ:ಗ್ಯಾಸ್ ರೀಫಿಲ್ಲಿಂಗ್ ಮಾಡಲು ನಗರಕ್ಕೆ 25 ದಿನ, ಗ್ರಾಮೀಣ ಪ್ರದೇಶಕ್ಕೆ 45 ದಿನಗಳ ಅವಧಿ ನಿಗದಿಪಡಿಸಿದ್ದು ಗ್ರಾಮೀಣ ಪ್ರದೇಶವೇ ಹೆಚ್ಚಾಗಿರುವ ಸುಳ್ಯ ತಾಲೂಕಿನಲ್ಲಿ ಜನರು ಸರಿಯಾಗಿ ಗ್ಯಾಸ್ ಸಿಗದೆ ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಕೇಂದ್ರ ಸರಕಾರ ಜನರಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸದ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಹಾಗೂ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕಲ್ಲು ಗ್ರಾಮೀಣ ಪ್ರದೇಶವೇ ಹೆಚ್ಚಾಗಿರುವ ಸುಳ್ಯದಲ್ಲಿ ಗ್ಯಾಸ್ಗಾಗಿ ಜನರು ಪರದಾಡಿವ ಸ್ಥಿತಿ ನಿರ್ಮಾಣ ಆಗಿದೆ. 45 ದಿನ ಗ್ಯಾಸ್ ಸಿಲಿಂಡರ್ ಬರುವುದಿಲ್ಲ, ಜನರಿಗೆ ಕಾಲ ಕಾಲಕ್ಕೆ ಗ್ಯಾಸ್ ಸರಿಯಾಗಿ ಸಿಗುತ್ತಿಲ್ಲ. ಕಳೆದ 6 ತಿಂಗಳಿನಿಂದ ಈ ಸಮಸ್ಯೆ ಇದೆ. ಕೇಂದ್ರ ಸರಕಾರ ಜನರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುತ್ತಿಲ್ಲ. ಗ್ಯಾಸ್ಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕಡಿತ ಮಾಡಿರುವ ಕೇಂದ್ರ ಸರಕಾರ ಇದೀಗ ಯುದ್ಧದ ಹೆಸರಿನಲ್ಲಿ ಗ್ಯಾಸ್ ಸರಬರಾಜು ವ್ಯವಸ್ಥೆಯೇ ಬುಡಮೇಲಾಗಿದೆ. ಗ್ರಾಮೀಣ ಜನರಿಗೆ ಗ್ಯಾಸ್ ಸಿಗದಂತೆ ಮಾಡಿದೆ.
ರಾಜ್ಯ ಸರಕಾರದ ಗಮನಕ್ಕೆ ತಂದು ಇದನ್ನು ಪರಿಹರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಒತ್ತಡ ತರುವುದಾಗಿ ಅವರು ತಿಳಿಸಿದರು. ಗ್ಯಾಸ್ ಬುಕ್ಕಿಂಗ್ ಅವಧಿಯನ್ನು ಕಡಿಮೆ ಮಾಡಬೇಕು, ಕೇಂದ್ರ ಸರಕಾರ ಕೂಡಲೇ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬಹುತೇಕ ದಿನಗಳಲ್ಲಿ ಭಾಗವಹಿಸದೇ ಇರುವುದು ಖಂಡನೀಯ ಎಂದು ಅಮಳ ರಾಮಚಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಸಂಯೋಜಕ ಪ್ರವೀಣ್ ಮುಂಡೋಡಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ ಕಾಂಗ್ರೆಸ್ ಪ್ರಮುಖರಾದ ಮಹೇಶ್ ಬೆಳ್ಳಾರ್ಕರ್,ಧನುಷ್ ಕುಕ್ಕೆಟ್ಟಿ, ಮಂಜುನಾಥ್ ಮಡ್ತಿಲ, ಕೇಶವ ಮೊರಂಗಲ್ಲು ಉಪಸ್ಥಿತರಿದ್ದರು.







