ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷಿಕರ ನಿದ್ದೆ ಕೆಡಿಸುವ ಕಸ್ತೂರಿರಂಗನ್ ವರದಿ ಜಾರಿ ಮಾಡುವುದಕ್ಕೆ ಬಿಜೆಪಿ ವಿರೋಧ ಇದೆ.ಕೃಷಿಕರು ನಡೆಸುವ ಯಾವುದೇ ಹೋರಾಟಕ್ಕೂ ಬಿಜೆಪಿ ಎಲ್ಲಾ ಬೆಂಬಲ ನೀಡಲಿದೆ ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಸುಳ್ಯ ಕ್ಷೇತ್ರದ ಜನತೆ ನೂರಾರು
ವರ್ಷಗಳಿಂದ ಪರಿಸರ, ಕಾಡು, ಜಲ ಮತ್ತು ನೈಸರ್ಗಿಕ ಕೃಷಿಗೆ ಒಗ್ಗಿಕೊಂಡು ಹಲವಾರು ತಲೆಮಾರುಗಳಿಂದ ಜೀವನ ನಡೆಸುತ್ತಾ ಬಂದಿದ್ದಾರೆ. ಹಲವು ರೀತಿಯ ಸಮಸ್ಯೆಯ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಕಸ್ತೂರಿ ರಂಗನ್ ವರದಿಯ ಜಾರಿಯ ಆತಂಕ ರೈತರನ್ನು ಸದಾ ಕಾಡಿದೆ. ಕೃಷಿಕರ ಆತಂಕವನ್ನು ದೂರ ಮಾಡಿ, ಅವರ ಬದುಕಿಗೆ ತೊಂದರೆ ಆಗದ ರೀತಿಯಲ್ಲಿ ಸರಕಾರಗಳು ಜನಪ್ರತಿನಿಧಿಗಳು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಪಕ್ಷಾತೀತವಾಗಿ ಜನರ ಜೊತೆ ನಿಲ್ಲಬೇಕಾಗಿರುವುದು ಅನಿವಾರ್ಯ. ಕಸ್ತೂರಿ ರಂಗನ್ ವರದಿ ಜಾರಿ
ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೂ ಬಿಜೆಪಿ ಬೆಂಬಲ ನೀಡಲಿದೆ. ಈ ಹಿನ್ನಲೆಯಲ್ಲಿ ಮುಂಚೂಣಿಯಲ್ಲಿ ನಿಂತು ಈ ನಾಡಿನ ಜನರ ಪರ ಹೋರಾಟ ಮಾಡುತ್ತಿರುವ ‘ಮಲೆನಾಡು ಹಿತ ರಕ್ಷಣಾ ವೇದಿಕೆ’ಯ ಮುಂದಿನ ಕಾರ್ಯ ಯೋಜನೆ ಮತ್ತು ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ರೈತರಿಗೆ ಶಕ್ತಿ ತುಂಬುವ ಕೆಲಸವನ್ನು ಪಕ್ಷ ಮತ್ತು ಕಾರ್ಯಕರ್ತರು ಮಾಡಲಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪ್ರತಿ ಗ್ರಾಮಕ್ಕೂ ಮುಂದೆ ಸಮಸ್ಯೆ ಆಗಲಿದೆ. ಆದುದರಿಂದ ಈ ಹೋರಾಟಕ್ಕೆ ಎಲ್ಲಾ ಗ್ರಾಮದ ನಾಗರಿಕರು ಕೈಜೋಡಿಸಬೇಕಾಗಿದೆ. ಎಲ್ಲರೂ ಒಟ್ಟಾಗಿ ನಮ್ಮ ನಾಡಿನ ರೈತರ ಬದುಕಿನ ರಕ್ಷಣೆಗೆ ಮಾಡಬೇಕಾಗಿದೆ ಎಂದು ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ










