ಸುಳ್ಯ: ಅಡುಗೆ ಅನಿಲ ವಿತರಣೆಯಲ್ಲಿ ನಗರ ಪ್ರದೇಶಕ್ಕೆ 25 ದಿನಕ್ಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಕ್ಕೆ ಗ್ಯಾಸ್ ಬುಕ್ಕಿಂಗ್ ನಿಗದಿಪಡಿಸಿರುವುದರಿಂದ ಗ್ರಾಮೀಣ ಪ್ರದೇಶವೇ ಅಧಿಕ ಇರುವ ಸುಳ್ಯ ತಾಲೂಕಿನಲ್ಲಿ ಗ್ಯಾಸ್ ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ. ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರದ
ಮಾರ್ಗಸೂಚಿಯಿಂದ ಈ ರೀತಿಯ ತಾರತಮ್ಯ ಆಗಿದೆ. ಇದನ್ನು ಬದಲಾಯಿಸಲು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ಅವರು ಆಗ್ರಹಿಸಿದರು. ಸಮಸ್ಯೆಯ ಬಗ್ಗೆ ಕೇರಳದ ಎಂಪಿಗಳು ಈಗಾಗಲೇ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗದ ಗ್ಯಾಸ್ ಸರಬರಾಜು ಸಮಸ್ಯೆಯ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿ ವಿತರಣೆಯಲ್ಲಿನ ಅಸಮಾನತೆಯನ್ನು ಸರಿಪಡಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು ಎಂದರು. ಈ ಕುರಿತು ಪತ್ರ ಬರೆದು ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಮಸ್ಯೆ ಪರಿಹರಿಸಲು ರಾಜ್ಯ ಸರಕಾರದಿಂದಲೂ ಕೇಂದ್ರದ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದರು.












