ಸುಳ್ಯ:ಬೆರಳಿನ ತುದಿಗೆ ಬೆಳಕು ಬಂದಾಗ ಅಕ್ಷರ ಮೂಡುವ ಇಂದಿನ ಯುಗದಲ್ಲಿ ಮೊಬೈಲ್ಗಳಲ್ಲಿ ಹಾಗೂ ನವ ಮಾಧ್ಯಮಗಳಲ್ಲಿ ಅತ್ಯುತ್ತಮ ಕವನ, ಕಥೆಗಳು ಹಾಗೂ ಅದ್ಭುತ ಬರಹಗಳು ಸೃಷ್ಠಿಯಾಗುತಿದೆ. ಕಾಗದದಲ್ಲಿ ಬರೆಯುವ ಬರಹ ಮಾತ್ರವಲ್ಲದೆ ನವ ಮಾಧ್ಯಮಗಳ ಬರಹಗಳನ್ನು ದಾಖಲಿಸುವ ಮತ್ತು ಅದಕ್ಕೆ ಪ್ರಶಸ್ತಿ ನೀಡುವ ಕೆಲಸ ಅಕಾಡೆಮಿಗಳು ಮಾಡಬೇಕು ಎಂದು ಸಾಹಿತಿ ಹಾಗೂ ಲೇಖಕರಾದ ಡಾ.ನರೇಂದ್ರ ರೈ ದೇರ್ಲ ಹೇಳಿದ್ದಾರೆ.ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ಸಂಭ್ರಮಾಚರಣೆ ಹಾಗೂ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಸಾಹಿತ್ಯ ಸಂಭ್ರಮ – 2023 ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕನ್ನಡದ ಬರಹಗಾರರು ಹಾಗೂ ಓದುಗರು ಸಾಕಷ್ಟು ಹೆಚ್ಚಾಗಿದ್ದಾರೆ.ರಾಜ್ಯದ ವಿವಿಧೆಡೆ ಪ್ರತಿ ದಿನ 30ಕ್ಕೂ ಅಧಿಕ ಪುಸ್ತಕಗಳು ಬಿಡುಗಡೆ ಆಗುತ್ತಿದೆ. ಪತ್ರಿಕೆಗಳನ್ನು ಹಾಗೂ ಪುಸ್ತಕಗಳನ್ನು ಓದುವ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪ್ರಬುದ್ಧತೆಯನ್ನು ಬೆಳೆಸಿ ಕೊಳ್ಳಬೇಕು. ಸಾಹಿತ್ಯದ ಪುಸ್ತಕಗಳು ನಮ್ಮೊಳಗಿನ ಬೆಳಕನ್ನು ಹೆಚ್ಚಿಸುತ್ತದೆ ಎಂದ ಅವರು ಪುಸ್ತಕವು ಕನ್ನಡಿಯಂತೆ

ನಮ್ಮನ್ನು ನಮಗೆ ಅರ್ಥ ಮಾಡಿಸಿ ಕೊಡುತ್ತದೆ. ನಮ್ಮೊಳಗಿನನ ಅಂತಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಕಸಾಪ ಕೋಶಾಧಿಕಾರಿ ದಯಾನಂದ ಆಳ್ವ ಅವರ ಮನೆ ಪದ್ಮಶ್ರೀಯಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಉಪನ್ಯಾಸಕ ಪ್ರೊ.ಸಂಜೀವ ಕುದ್ಪಾಜೆ ಅವರು ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರ ಬದುಕು, ಬರಹ ಅವಲೋಕನ ಕುರಿತು ಮಾತನಾಡಿದರು. ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಮುಖ್ಯ ಅತಿಥಿಯಾಗಿದ್ದರು.

ಸಮಾರಂಭದಲ್ಲಿ ಡಾ.ಉಮ್ಮರ್ ಬೀಜದಕಟ್ಟೆ, ಪಿ.ಬಿ.ಸುಧಾಕರ ರೈ, ಡಾ.ನಿತಿನ್ ಪ್ರಭು, ಕೋಡ್ಲ ಗಣಪತಿ ಭಟ್, ಜಯರಾಮ ಬೊಳಿಯಮಜಲು ಅವರನ್ನು ಸನ್ಮಾನಿಸಲಾಯಿತು. ವೆಂಕಟ್ರಾಮ್ ಭಟ್, ಲೀಲಾ ದಾಮೋದರ, ಕೆ.ಟಿ.ವಿಶ್ವನಾಥ, ಕೆ.ಆರ್.ಗೋಪಾಲಕೃಷ್ಣ ಅವರನ್ನು ಗೌರವಿಸಲಾಯಿತು.
ಕಸಾಪ ಮಾಜಿ ಅಧ್ಯಕ್ಷೆ ಎಂ.ಮೀನಾಕ್ಷಿ ಗೌಡ,ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಚಂದ್ರಮತಿ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಸಾಪ ಕೋಶಾಧಿಕಾರಿ ದಯಾನಂದ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಾದ ಶರೀಫ್ ಜಟ್ಟಿಪಳ್ಳ ಸನ್ಮಾನ ಪತ್ರ ವಾಚಿಸಿದರು. ಸಂಕೀರ್ಣ ಚೊಕ್ಕಾಡಿ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.











