ದುಬೈ: ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ನಿವೃತ್ತಿ ವದಂತಿಗಳ ಕುರಿತು ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ. ಏಕದಿನ ಕ್ರಿಕೆಟ್ ಮಾದರಿಯಿಂದ ನಾನು ನಿವೃತ್ತಿಯಾಗುವುದಿಲ್ಲ. ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ ಎಂದು ಅವರು ಹೇಳಿದ್ದಾರೆ. ರೋಹಿತ್ ಅವರ ಕ್ರಿಕೆಟ್ ನಿವೃತ್ತಿಯ ಕುರಿತು ಊಹಾಪೋಹಗಳು ಹರಿದಾಡಿದ್ದವು. ಆದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ
ಅಮೋಘ ಅರ್ಧಶತಕ ಸಿಡಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟ ರೋಹಿತ್, ಪಂದ್ಯದ ನಂತರ ಎಲ್ಲ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.ದುಬೈನಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗೆ 251 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್ಗೆ 254 ರನ್ ಗಳಿಸಿ ಜಯದ ನಗೆ ಬೀರಿತು.
ನಿರ್ಣಾಯಕ ಪಂದ್ಯದಲ್ಲಿ ಫಾರ್ಮ್ಗೆ ಮರಳಿದ ರೋಹಿತ್ 83 ಎಸೆತಗಳಲ್ಲಿ 76 ರನ್ ಗಳಿಸುವ ಮೂಲಕ ಟೀಂ ಇಂಡಿಯಾದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.ಬಳಿಕ ಮಾತನಾಡಿದ ರೋಹಿತ್ ಅವರನ್ನು, ನಿವೃತ್ತಿ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ‘ಏಕದಿನ ಕ್ರಿಕೆಟ್ ಮಾದರಿಯಿಂದ ಈಗಲೇ ನಿವೃತ್ತಿಯಾಗುವುದಿಲ್ಲ. ದಯವಿಟ್ಟು ವದಂತಿಗಳನ್ನು ಹರಡಬೇಡಿ. ಭವಿಷ್ಯದ ಯೋಜನೆಗಳೇನೂ ಇಲ್ಲ. ಎಲ್ಲವೂ ಹೀಗೆಯೇ ಮುಂದುವರಿಯುತ್ತದೆ’ ಎಂದಿದ್ದಾರೆ.ತಮ್ಮ ‘ಫೈನಲ್’ ಪ್ರದರ್ಶನದ ಕುರಿತು, ‘ಹಿಂದಿನ ಮೂರ್ನಾಲ್ಕು ಪಂದ್ಯಗಳಲ್ಲಿ ಆಡಿದಂತೆಯೇ ಈ ಪಂದ್ಯದಲ್ಲೂ ಯಾವುದೇ ಬದಲಾವಣೆ ಇಲ್ಲದೆ ಆಡಿದೆ. ಪವರ್ ಪ್ಲೇನಲ್ಲಿ ರನ್ ಗಳಿಸುವುದು ಎಷ್ಟು ಮುಖ್ಯ ಎಂಬುದು ಗೊತ್ತಿದೆ. ಏಕೆಂದರೆ, ಮೊದಲ 10 ಓವರ್ಗಳ ಬಳಿಕ ಸ್ಪಿನ್ನರ್ಗಳು ದಾಳಿಗಿಳಿದಾಗ, ಕ್ಷೇತ್ರ ರಕ್ಷಣೆಯಲ್ಲಿ ಬದಲಾವಣೆಗಳಾದಾಗ ರನ್ ಗಳಿಸುವುದು ಕಷ್ಟವಾಗುತ್ತದೆ’ ಎಂದು ಹೇಳಿದ್ದಾರೆ.