ಪುತ್ತೂರು:ಪುತ್ತೂರಿನಲ್ಲಿ ಏಳನೇ ವರುಷದ ಹಲಸು-ಹಣ್ಣು ಮೇಳ ಜೂನ್ 6ರಿಂದ 8ರ ತನಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಪುತ್ತೂರು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವತೇಜ ಟ್ರಸ್ಟ್ ಪುತ್ತೂರು ಜೊತೆಗೆ ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಮೇಳದಲ್ಲಿ ಸುಮಾರು ಎಪ್ಪತ್ತು ಮಳಿಗೆಗಳಿಗೆ ಅವಕಾಶ ನೀಡಲಾಗಿದೆ.
ಯಾವುದೇ ಕೃತಕ ಬಣ್ಣ, ಒಳಸುರಿಗಳನ್ನು ಬಳಸದ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ. ಮರೆತ ಹಾಗೂ ಮರೆವಿನಂಚಿಲ್ಲಿರುವ ಪಾರಂಪರಿಕ
ತಿಂಡಿಗಳನ್ನು ಸ್ಥಳದಲ್ಲೇ ತಯಾರಿಸುವ ಯೋಜನೆ ರೂಪಿಸಲಾಗಿದೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ. ಬೆಳಿಗ್ಗೆ 10ಕ್ಕೆ ಮಳಿಗೆಗಳನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉದ್ಘಾಟಿಸಲಿದ್ದಾರೆ. ಸಂಜೆ 4ಕ್ಕೆ ಮೇಳ ಆರಂಭಗೊಳ್ಳಲಿದ್ದು, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕಾರ್ ಕೊಡ್ಗಿ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಎಇ ಚಾಲನೆ ನೀಡುವರು. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.ಜೂನ್ 6ರಂದು ಸಂಜೆ ಹಲಸಿನ
ಕುರಿತಾದ ಕವಿಗೋಷ್ಠಿ ಈ ಬಾರಿಯ ಮೇಳದ ವಿಶೇಷತೆ. ಜೂನ್ 7ರಂದು ಬೆಳಿಗ್ಗೆ 11ಕ್ಕೆ ಹಣ್ಣುಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಜೂನ್ 7ರಂದು ಸಂಜೆ ಹಲಸಿನ ಅರಿವಿನ ಹರಿವಿನ ಸುತ್ತ ಹೆಣೆದ ಯಕ್ಷಗಾನ ತಾಳಮದ್ದಳೆ ‘ಪನಸೋಪಾಖ್ಯಾನ’ ಪ್ರಸ್ತುತಿ. ಮೇಳಕ್ಕೆಂದೇ ಸಿದ್ಧಪಡಿಸಲಾದ ಹೊಚ್ಚಹೊಸ ಪ್ರಸಂಗ ಜಿಲ್ಲೆಯ ಪ್ರಸಿದ್ದ ಕಲಾವಿದರು ಭಾಗವಹಿಸಲಿದ್ದಾರೆ.
ಮೇಳದ ಕೊನೆಯ ದಿನದಂದು ಹಲಸು ಮತ್ತು ಮಾವಿನ ಊಟ. ಸುಮಾರು ಇಪ್ಪತ್ತೈದು ಬಗೆಯ ವೈವಿಧ್ಯ ಖಾದ್ಯಗಳು. ಮೊದಲೇ ಟಿಕೇಟ್ ಕಾದಿರಿಸಿದ 250 ಮಂದಿಗೆ ಭೋಜನ ಸವಿಯುವ ಅವಕಾಶ ಇದೆ ಎಂದರು. ವಿವಿಧ ಹಲಸಿನ ಹಣ್ಣುಗಳು ರುಚಿಪ್ರಿಯರ ನಾಲಗೆ ಗೆಲ್ಲಲಿದೆ.
ಹಲಸು ಹಾಗೂ ಮಾವಿನ ಹಣ್ಣುಗಳನ್ನು ಕೃಷಿಕರೇ ಸ್ವತಃ ಬೆಳೆದು. ಮಾರುತ್ತಿರುವುದು ಮೇಳದ ಹೈಲೈಟ್. ಹಲಸಿನ ಉಂಡ್ಲಕಾಳು , ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್,
ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ ಇದೆ. ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆಗಳು ಲಭ್ಯ. ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಆಗ್ರಿ ಬ್ಯುಸಿನೆಸ್ ಮಳಿಗೆಗಳು, ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ. ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು, ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ.
ಮೇಳದಲ್ಲಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿಕರನ್ನು ಒಂದೇ ಸೂರಿನಡಿ ತಂದು ಕೃಷಿ ಉತ್ಪನ್ನಗಳಿಗೆ ಉದ್ಯಮದ ಸ್ವರೂಪ ನೀಡುವ ಯತ್ನವು ಮೇಳದ ಉದ್ದೇಶಗಳಲ್ಲೊಂದು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿವಿಧ ಕ್ಷೇತ್ರದ ಗಣ್ಯರು, ಕೃಷಿಕರು ಆಗಮಿಸಲಿದ್ದಾರೆ.
ಜೂನ್ 8ರಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು ಸಂಸದ ಕ್ಯಾ. ಬ್ರಿಜೇಶ್ ಚೌಟ ಭಾಗವಹಿಸಲಿದ್ದಾರೆ. ಉಪ್ಪಿನಂಗಡಿ ಬಳ್ಳಿ ಆಯುರ್ ಗ್ರಾಮದ ಮುಖ್ಯವೈದ್ಯ ಡಾ. ಸುಪ್ರೀತ್ ಲೋಬೋ ಸಮಾರೋಪ ಮಾತುಗಳನ್ನಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್’ನ ಸುಹಾಸ್ ಮರಿಕೆ, ವೇಣುಗೋಪಾಲ್ ಎಸ್.ಜೆ., ರೋಟರಿ ಕ್ಲಬ್ ಪುತ್ತೂರು ಯುವದ ನಿಯೋಜಿತ ಅಧ್ಯಕ್ಷ ಕುಸುಮಾಧರ್, ಜೇಕಾಮ್ ಪುತ್ತೂರು ಟೇಬಲ್ 1.0 ಚೇರ್’ಮೆನ್ ಪಶುಪತಿ ಶರ್ಮಾ ಉಪಸ್ಥಿತರಿದ್ದರು.