ಚಂಡೀಗಢ: ಪಂಜಾಬ್ ಕಿಂಗ್ಸ್ ವಿರುದ್ಧ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.ಆ ಮೂಲಕ ಒಂದು ದಿನದ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಎದುರಾದ ಸೋಲಿಗೆ ಸೇಡು ತೀರಿಸಿಕೊಂಡಿದೆ.ಮೊದಲು ಆರ್ಸಿಬಿ ಬೌಲರ್ಗಳ ಸಾಂಘಿಕ ದಾಳಿಗೆ ಕುಸಿದ ಪಂಜಾಬ್ ಆರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಬಳಿಕ ವಿರಾಟ್ ಕೊಹ್ಲಿ (73) ಹಾಗೂ ದೇವದತ್ತ ಪಡಿಕ್ಕಲ್ ಆಕರ್ಷಕ ಅರ್ಧಶತಕಗಳ (61) ನೆರವಿನಿಂದ ಆರ್ಸಿಬಿ 18.5 ಓವರ್ಗಳಲ್ಲಿ
ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇದರೊಂದಿಗೆ ತವರಿನಾಚೆಯ ತಾಣಗಳಲ್ಲಿ ಆಡಿದ ಎಲ್ಲ ಐದು ಪಂದ್ಯಗಳಲ್ಲಿ ಆರ್ಸಿಬಿ ಜಯಭೇರಿ ಮೊಳಗಿಸಿದೆ. ಆರ್ಸಿಬಿಗೆ ಆರಂಭದಲ್ಲೇ ಫಿಲ್ ಸಾಲ್ಟ್ (1) ವಿಕೆಟ್ ನಷ್ಟವಾಯಿತು. ಆದರೆ ದ್ವಿತೀಯ ವಿಕೆಟ್ಗೆ ಶತಕದ ಜೊತೆಯಾಟ ಕಟ್ಟಿದ ಕೊಹ್ಲಿ ಹಾಗೂ ಪಡಿಕ್ಕಲ್ ತಂಡದ ಗೆಲುವನ್ನು ಸುಲಭಗೊಳಿಸಿದರು.
ಆಕ್ರಮಣಕಾರಿ ಆಟವಾಡಿದ ಪಡಿಕ್ಕಲ್ 35 ಎಸೆತಗಳಲ್ಲಿ 61 ರನ್ (ಐದು ಬೌಂಡರಿ, 4 ಸಿಕ್ಸರ್) ಗಳಿಸಿ ಅಬ್ಬರಿಸಿದರು. ಮತ್ತೊಂದೆಡೆ ಸಮಯೋಚಿತ ಇನಿಂಗ್ಸ್ ಕಟ್ಟಿದ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಲ್ಲದೆ ಐಪಿಎಲ್ನಲ್ಲಿ 67ನೇ ಸಲ 50ಕ್ಕೂ ಹೆಚ್ಚು ರನ್ (ಶತಕ ಸೇರಿದಂತೆ) ಗಳಿಸುವ ಮೂಲಕ ನೂತನ ದಾಖಲೆ ಬರೆದರು. ಕೊಹ್ಲಿ 54 ಎಸೆತಗಳಲ್ಲಿ 73 ರನ್ ಗಳಿಸಿ ಔಟಾಗದೆ ಉಳಿದರು. ಕೊಹ್ಲಿಯ ಆಕರ್ಷಕ ಇನಿಂಗ್ಸ್ನಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಇನ್ನುಳಿದಂತೆ ರಜತ್ ಪಾಟೀದಾರ್ 12 ಹಾಗೂ ಜಿತೇಶ್ ಶರ್ಮಾ ಅಜೇಯ 11 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ನಿಗದಿತ 20 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆರ್ಸಿಬಿ ಬೌಲರ್ಗಳು ನಿಖರ ದಾಳಿ ಸಂಘಟಿಸುವ ಮೂಲಕ ಪಂಜಾಬ್ ಓಟಕ್ಕೆ ಕಡಿವಾಟ ಹಾಕುವಲ್ಲಿ ಯಶಸ್ವಿಯಾದರು. ಪಂಜಾಬ್ ತಂಡಕ್ಕೆ ಓಪನರ್ಗಳಾದ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಬಿರುಸಿನ ಆರಂಭವೊದಗಿಸಿದರು. ಆದರೆ ಅವರಿಬ್ಬರನ್ನು ಹೊರದಬ್ಬುವಲ್ಲಿ ಕೃಣಾಲ್ ಪಾಂಡ್ಯ ಯಶಸ್ವಿಯಾದರು. ಪ್ರಭ್ಸಿಮ್ರಾನ್ 33 ಹಾಗೂ ಪ್ರಿಯಾಂಶ್ 22 ರನ್ ಗಳಿಸಿ ಔಟ್ ಆದರು. ನಾಯಕ ಶ್ರೇಯಸ್ ಅಯ್ಯರ್ (6) ಸಹ ನಿರಾಸೆ ಮೂಡಿಸಿದರು. ನೆಹಲ್ ವಧೇರಾ (5) ರನೌಟ್ ಆದರು. ಜೋಶ್ ಇಂಗ್ಲಿಸ್ (29) ಹಾಗೂ ಶಶಾಂಕ್ ಸಿಂಗ್ (31) ಉಪಯುಕ್ತ ಇನಿಂಗ್ಸ್ ಕಟ್ಟುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.
ಇನ್ನುಳಿದಂತೆ ಮಾರ್ಕಸ್ ಸ್ಟೋಯಿನಿಸ್ (1) ರನ್ ಗಳಿಸಿದರು. ಆರ್ಸಿಬಿ ಪರ ಕೃಣಾಲ್ ಹಾಗೂ ಸುಯೇಶ್ ಶರ್ಮಾ ತಲಾ ಎರಡು ವಿಕೆಟ್ ಗಳಿಸಿದರು.