ಧರ್ಮಸ್ಥಳ: ಕಲ್ಯಾಣಮಂಟಪ ನಿರ್ಮಾಣ ಪುಣ್ಯದ ಕಾಯಕ. ಧರ್ಮಸ್ಥಳದ ಬಹುಮುಖಿ ಸೇವೆ, ಸಾಧನೆ ಶ್ಲಾಘನೀಯವಾಗಿದೆ ಎಂದು ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ಶ್ರೀ ಉಮಾಮಹೇಶ್ವರ, ಶ್ರೀ ಶಿವಪಾರ್ವತಿ ಮತ್ತು ಶ್ರೀ ಗೌರೀಶಂಕರ ಎಂಬ ಮೂರು ನೂತನ ಕಲ್ಯಾಣ ಮಂಟಪಗಳ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು.
ದೇವರಲ್ಲಿ ಶ್ರದ್ಧಾ-ಭಕ್ತಿಯಿಂದ ನಂಬಿಕೆ ಇಟ್ಟು ಪ್ರಾರ್ಥನೆ ಮಾಡಿದಾಗ ನಮ್ಮ
ಇಷ್ಟಾರ್ಥಗಳು ಸುಲಲಿತವಾಗಿ ಈಡೇರುತ್ತವೆ. ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಮನುಷ್ಯತ್ವದಿಂದ ಸಾರ್ಥಕ ಜೀವನ ನಡೆಸಿದಾಗ ಮೋಕ್ಷ ಸಾಧನೆ ಸಾಧ್ಯವಾಗುತ್ತದೆ.ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುತ್ತಿರುವ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ಎಂಬ ಚತುರ್ದಾನಗಳು ದೇಶದ ಇತಿಹಾಸದಲ್ಲೇ ಸುವರ್ಣಾಕ್ಷರಗಳಿಂದ ಬರೆಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದಂಪತಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಸಾರ್ಥಕ ಜೀವನ ನಡೆಸಬೇಕು. ಧರ್ಮಸ್ಥಳದಲ್ಲಿ ಮದುವೆ ಆದರೆ ತಮ್ಮ ಬದುಕು ಸಾರ್ಥಕ ಹಾಗೂ ಸುಖಮಯವಾಗುತ್ತದೆ ಎಂದು ಭಕ್ತರಲ್ಲಿ ನಂಬಿಕೆ ಹಾಗೂ ವಿಶ್ವಾಸವಿದೆ. ಭಕ್ತರ ಅನುಕೂಲಕ್ಕಾಗಿ ಧರ್ಮಸ್ಥಳದಲ್ಲಿ ಮೂರು ಕಲ್ಯಾಣ ಮಂಟಪಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ಬೆಳ್ತಂಗಡಿ, ಭದ್ರಾವತಿ, ಬೆಂಗಳೂರು, ಬಂಟ್ವಾಳ, ಮೈಸೂರು ಮೊದಲಾದ ಕಡೆಗಳಲ್ಲಿ ಕೂಡಾ ಧರ್ಮಸ್ಥಳದ ವತಿಯಿಂದ ಕಲ್ಯಾಣಮಂಟಪಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೆಗ್ಗಡೆಯವರು ಕ್ಷೇತ್ರದ ವತಿಯಿಂದ ಗೌರವಿಸಿ ಶುಭ ಹಾರೈಸಿದರು.
ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಾಜಿ ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.
ಹೇಮಾವತಿ ವೀ. ಹೆಗ್ಗಡೆ, ಶ್ರದ್ಧಾ ಅಮಿತ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಶ್ರೇಯಸ್ ಕುಮಾರ್, ಡಿ. ನಿಶ್ಚಲ್ ಕುಮಾರ್ ಇದ್ದರು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಎಂಜಿನಿಯರ್ ಯಶೋಧರ ಧನ್ಯವಾದವಿತ್ತರು. ಸುಬ್ರಹ್ಮಣ್ಯ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.