ಬೆಂಗಳೂರು: ಬೌಲರ್ಗಳ ಮಾರಕ ದಾಳಿ, ಬ್ಯಾಟರ್ಗಳ ಅಬ್ಬರದ ಬ್ಯಾಟಿಂಗ್ ಸೇರಿ ತಂಡದ ಸಂಘಟಿತ ಪ್ರದರ್ಶನದ ನೆರವಿನಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು 5 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು.ಬೆಂಗಳೂರಿನ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡವು 20 ಓವರ್ಗಳಲ್ಲಿ 146 ರನ್ ಗಳಿಸಿ ಆಲೌಟ್ ಆಗಿದೆ. ಗುರಿ ಬೆನ್ನಟ್ಟಿದ ಆರ್ಸಿಬಿ 15.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಟೂರ್ನಿಯಲ್ಲಿ ಆಡಿದ ಐದು ಪಂದ್ಯದಲ್ಲಿ ನಾಲ್ಕನೇ ಜಯ ದಾಖಲಿಸಿತು.
ಆರ್ಸಿಬಿ ಪರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (49ರನ್ 34 ಎಸೆತ,6ಬೌಂಡರಿ 1 ಸಿಕ್ಸರ್) ಸರ್ವಾಧಿಕ ರನ್ ಗಳಿಸಿದರು. ನಾಯಕ ರಜತ್ ಪಾಟಿದಾರ್ 13 ಎಸೆತಗಳಲ್ಲಿ 3 ಸಿಕ್ಸರ್ 1 ಬೌಂಡರಿ ನೆರವಿನಿಂದ 27, ಜಿತೇಶ್ ಶರ್ಮ 9 ಎಸೆತಗಳಲ್ಲಿ 2 ಸಿಕ್ಸರ್ 2 ಬೌಂಡರಿ ನೆರವಿನಿಂದ 23 ರನ್ ಗಳಿಸಿದರು. ಅಜೇಯರಾಗಿ ತಲಾ 14 ರನ್ ಗಳಿಸಿದ ಟಿಮ್ ಡೇವಿಡ್ ಮತ್ತು ಮಾರಿಯಾ ಶೆಫರ್ಡ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೊದಲು ಬ್ಯಾಟ್ ಮಾಡಿದ ಲಕ್ನೋ ಭುವನೇಶ್ವರ್ ಕುಮಾರ್ ಹಾಗೂ ರಸಿಕ್ ದಾರ್ ಬೌಲಿಂಗ್ ದಾಳಿಗೆ ಕುಸಿಯಿತು.
ಲಖನೌ ಪರ ಮಿಚೆಲ್ ಮಾರ್ಷ್ 40, ಮುಕುಲ್ ಚೌಧರಿ 39, ಆಯುಷ್ ಬಡೋನಿ 38 ರನ್ ಗಳಿಸಿ ಗಮನ ಸೆಳೆದರು. ಉಳಿದಂತೆ ಯಾವೊಬ್ಬ ಆಟಗಾರರು ಎರಡಂಕಿ ಮೊತ್ತ ಗಳಿಸಲಿಲ್ಲ.
ಆರ್ಸಿಬಿ ಪರ ರಾಸಿಕ್ ಸಲಾಂ ದಾರ್ 4, ಭುವನೇಶ್ವರ್ ಕುಮಾರ್ 3, ಕೃಣಾಲ್ ಪಾಂಡ್ಯ 2, ಜೋಶ್ ಹ್ಯಾಜಲ್ವುಡ್ 1 ವಿಕೆಟ್ ಪಡೆದರು. ಉತ್ತಮ ದಾಳಿ ಸಂಘಟಿಸಿಸ ಜೋಶ್ ಹ್ಯಾಜಲ್ವುಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
















