ಗ್ಲಾಸ್ಗೋ:ಕಾಮನ್ವೆಲ್ತ್ ಗೇಮ್ಸ್ ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ಗುರುವಾರ ಆರಂಭಗೊಂಡಿದೆ. 11 ದಿನಗಳ ಕ್ರೀಡಾಕೂಟದಲ್ಲಿ ಭಾರತ ಸೇರಿದಂತೆ ವಿಶ್ವದೆಲ್ಲೆಡೆಯ 74 ದೇಶಗಳ 3000ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದಾರೆ.ಒಲಿಂಪಿಕ್ಸ್ನಂತೆ ಕಾಮನ್ವೆಲ್ತ್ ಗೇಮ್ಸ್ ಕೂಡಾ ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತವೆ. 2022ರ ಗೇಮ್ಸ್ಗೆ
ಬರ್ಮಿಂಗ್ಹ್ಯಾಮ್ ಆತಿಥ್ಯ ವಹಿಸಿತ್ತು. ಅಥ್ಲೆಟಿಕ್ಸ್, ವೇಟ್ಲಿಫ್ಟಿಂಗ್, ಈಜು, ಸೈಕ್ಲಿಂಗ್, ಬಾಸ್ಕೆಟ್ಬಾಲ್ ಸೇರಿದಂತೆ 10 ಕ್ರೀಡೆಗಳಿವೆ. ಪ್ಯಾರಾ ಕ್ರೀಡಾಪಟುಗಳ 6 ಕ್ರೀಡೆಗಳೂ ಇವೆ.ಸ್ಕಾಟ್ಲೆಂಡ್ನ ಒಟ್ಟು 7 ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಆ.2ರಂದು ಸಮಾರೋಪಗೊಳ್ಳಲಿದೆ.
ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಈ ಬಾರಿ ಹಲವು ಕ್ರೀಡೆಗಳನ್ನು ಕೈ ಬಿಡಲಾಗಿದೆ. ಕಳೆದ ಬಾರಿ ಬರ್ಮಿಂಗ್ಹ್ಯಾಮ್ನಲ್ಲಿ 20 ಕ್ರೀಡೆಗಳನ್ನು ನಡೆಸಲಾಗಿತ್ತು. ಅದರಲ್ಲಿ ಮಹಿಳಾ ಕ್ರಿಕೆಟ್ ಕೂಡಾ ಇತ್ತು. ಆದರೆ ಈ ಬಾರಿ ಕ್ರಿಕೆಟ್, ಬ್ಯಾಡ್ಮಿಂಟನ್, ಶೂಟಿಂಗ್, ಹಾಕಿ, ಕುಸ್ತಿ ಸೇರಿ ಪ್ರಮುಖ ಕ್ರೀಡೆಗಳಿಗೆ ಕೊಕ್ ನೀಡಲಾಗಿದೆ. ಕಳೆದ ಬಾರಿ ಭಾರತ 61 ಪದಕ ಗೆದ್ದಿತ್ತು. ಅದರಲ್ಲಿ 25 ಪದಕಗಳು ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್, ಟೇಬಲ್ ಟೆನಿಸ್ನಿಂದಲೇ ಬಂದಿದ್ದವು.
ಈ ಮಧ್ಯೆ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಭಾರತಕ್ಕೆ ಮೊದಲ ಪದಕ ಖಚಿತಪಡಿಸಿಕೊಂಡಿದ್ದಾರೆ. ಮಹಿಳೆಯರ ಬಾಕ್ಸಿಂಗ್ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿರುವ ಅವರು ನೇರವಾಗಿ ಸೆಮಿಫೈನಲ್ಗೆ ‘ಬೈ ಪಡೆದಿರುವುದರಿಂದ ಕಂಚಿನ ಪದಕ ಖಾತರಿಯಾಗಿದೆ.ಬಾಕ್ಸಿಂಗ್ ಸ್ಪರ್ಧೆಗಳು ಶುಕ್ರವಾರ ಆರಂಭವಾಗಲಿವೆ. 75 ಕೆ.ಜಿ. ವಿಭಾಗದಲ್ಲಿ ಐವರಷ್ಟೇ ಕಣದಲ್ಲಿದ್ದಾರೆ. ಸೆಮಿಫೈನಲ್ ತಲುಪಿದವರಿಗೆ ಪದಕ ಖಚಿತ. ಲವ್ಲಿನಾ ಜುಲೈ 31ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ತುವಾಲು ದೇಶದ ತಾಫಕಿ ಅವರನ್ನು ಎದುರಿಸಲಿದ್ದಾರೆ.
ಅಸ್ಸಾಮಿನ ಬಾಕ್ಸರ್ ಈ ಹಿಂದೆ ಒಲಿಂಪಿಕ್ ಕ್ರೀಡೆಗಳಲ್ಲಿ, ವಿಶ್ವ ಚಾಂಪಿಯನ್ಷಿಪ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.








