ಹರಾರೆ:ವೈಭವ್ ಸೂರ್ಯವಂಶಿ ಕೇವಲ 18 ಎಸೆತಗಳಲ್ಲಿ ಬಾರಿಸಿದ ಅರ್ಧಶತಕ ನೆರವಿನಿಂದ ಭಾರತ ತಂಡ ಜಿಂಬಾಬ್ವೆ ವಿರುದ್ಧ 7 ವಿಕೆಟ್ಗಳ ಜಯ ದಾಖಲಿಸಿದೆ.ಇದು ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಭಾರತಕ್ಕೆ ದೊರಕಿದ ಮೊದಲ ಟಿ20 ಗೆಲುವಾಗಿದೆ.ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ
ಜುಲೈ 23ರಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ 125 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡ 13.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಗಳಿಸಿ ಜಯಭೇರಿ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಬ್ಯಾಟಿಂಗ್ನಲ್ಲಿ ಮಿಂಚಿದ ಸೂರ್ಯವಂಶಿ, 4 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ ಕೇವಲ 19 ಎಸೆತಗಳಲ್ಲಿ 50 ರನ್ ಚಚ್ಚಿದರು. 15 ವರ್ಷದ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಬಾರಿಸಿ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ, ಅಂತರರಾಷ್ಟ್ರೀಯ ಟಿ20ಯಲ್ಲಿ ಅರ್ಧಶತಕ ಗಳಿಸಿದ ಜಗತ್ತಿನ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಶಾನ್ ಕಿಶನ್ 35, ಶ್ರೇಯಸ್ ಅಯ್ಯರ್ 28 ರನ್ ಬಾರಿಸಿದರು. ಜಿಂಬಾಬ್ವೆ ಪರ ವೆಸ್ಸಿ ಮಾಧವೆರೆ 39, ತಾಡಿವನಾಸೆ ಮುರುಮಾನಿ 27, ರಾನ್ ಬೇಳ್ 26 ರನ್ ಬಾರಿಸಿದರು. ಭಾರತದ ಪರ ಮಾಯಾಂಕ್ ಯಾದವ್ 18ಕ್ಕೆ 2, ಪ್ರಿನ್ಸ್ ಯಾದವ್ 19ಕ್ಕೆ 2. ವಿಕೆಟ್ ಪಡೆದರು.








