ಮಯಾಮಿ:2026ರ ಫಿಫಾ ವಿಶ್ವಕಪ್ ಟೂರ್ನಿಯ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಇಂಗ್ಲೆಂಡ್ 6-4 ಗೋಲುಗಳ ಅಂತರದ ಜಯ ದಾಖಲಿಸಿದೆ. ಇದರೊಂದಿಗೆ ಇಂಗ್ಲೆಂಡ್ ಕಂಚಿನ ಪದಕ ತನ್ನದಾಗಿಸಿಕೊಂಡಿತು.ಇಂಗ್ಲೆಂಡ್ ಪರ ಸ್ಟ್ರೈಕರ್ ಬುಕಾಯೊ ಸಕ ‘ಹ್ಯಾಟ್ರಿಕ್’ ಗೋಲು ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಮತ್ತೊಂದೆಡೆ
ಫ್ರಾನ್ಸ್ ಪರ ನಾಯಕ ಕೈಲಿಯನ್ ಎಂಬಾಪೆ ಗಳಿಸಿದ ಅವಳಿ ಗೋಲುಗಳ ಹೋರಾಟ ವ್ಯರ್ಥವಾಯಿತು. ಪಂದ್ಯದ ಮೊದಲಾರ್ಧದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಇಂಗ್ಲೆಂಡ್, 4-0 ಗೋಲುಗಳ ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿದ ಫ್ರಾನ್ಸ್, ಸತತ ಗೋಲುಗಳ ಸುರಿಮಳೆಗೈದಿತು. ಕೈಲಿಯನ್ ಎಂಬಾಪೆ (48 ಮತ್ತು 66ನೇ ನಿಮಿಷ) ಎರಡು ಗೋಲು ಗಳಿಸಿದರೆ, ಬ್ರಾಡ್ಲಿ ಬಾರ್ಕೋಲಾ ಮತ್ತು ಒಸ್ಮಾನೆ ಡೆಂಬೆಲೆ ತಲಾ ಒಂದು ಗೋಲು ಗಳಿಸಿ ಇಂಗ್ಲೆಂಡ್ ಪಾಳಯದಲ್ಲಿ ಆತಂಕ ಸೃಷ್ಟಿಸಿದರು. ಒಂದು ಹಂತದಲ್ಲಿ ಸ್ಕೋರ್ 5-4ಕ್ಕೆ ಬಂದು ತಲುಪಿತ್ತು. ಆದರೆ ಪಂದ್ಯದ ಇಂಜುರಿ ಟೈಮ್ನಲ್ಲಿ (90+8ನೇ ನಿಮಿಷ) ಜೂಡ್ ಬೆಲ್ಲಿಂಗ್ಹ್ಯಾಮ್ ಹೊಡೆದ ಗೋಲು ಆಂಗ್ಲರ ಪಡೆಯ ಗೆಲುವನ್ನು ಖಚಿತಪಡಿಸಿತು.
ಮೊದಲಾರ್ಧದ ಅಂತ್ಯದ ವೇಳೆಗೆ (37 ಮತ್ತು 45+1ನೇ ನಿಮಿಷ) ಬ್ಯಾಕ್-ಟು-ಬ್ಯಾಕ್ ಗೋಲು ಬಾರಿಸಿದ್ದ ಬುಕಾಯೊ ಸಕ, ದ್ವಿತೀಯಾರ್ಧದ 87ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಯಶಸ್ವಿಯಾಗಿ ಗೋಲಾಗಿ ಪರಿವರ್ತಿಸಿ ತಮ್ಮ ಹ್ಯಾಟ್ರಿಕ್ ಪೂರ್ಣಗೊಳಿಸಿದರು.
ಉಳಿದೆರಡು ಗೋಲುಗಳನ್ನು ಡಿಕ್ಲಾನ್ ರೈಸ್ (3ನೇ ನಿಮಿಷ) ಮತ್ತು ಎಜ್ರಿ ಕನ್ಸಾ (18ನೇ ನಿಮಿಷ) ಗಳಿಸಿದರು. ಒಟ್ಟಾರೆಯಾಗಿ ಪಂದ್ಯದಲ್ಲಿ 10 ಗೋಲುಗಳು ದಾಖಲಾದವು.
ಮತ್ತೊಂದೆಡೆ ಎಂಬಾಪೆ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ (22 ಗೋಲು) ಎಂದೆನಿಸಿದರು. ಅಲ್ಲದೆ ಪ್ರಸಕ್ತ ಸಾಗುತ್ತಿರುವ ವಿಶ್ವಕಪ್ನಲ್ಲಿ ಗೋಲ್ಡನ್ ಬೂಟ್ ರೇಸ್ನಲ್ಲೂ (10 ಗೋಲು) ಮುಂಚೂಣಿಯಲ್ಲಿದ್ದಾರೆ.
ಭಾನುವಾರ ರಾತ್ರಿ 12.30ಕ್ಕೆ ನಡೆಯಲಿರುವ ಫೈನಲ್ನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಸ್ಪೇನ್ ಸವಾಲನ್ನು ಎದುರಿಸಲಿದೆ.ನ್ಯೂಯಾರ್ಕ್ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ನ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿದ್ದು, ವಿವಿಧ ರೀತಿಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಪ್ರೇಕ್ಷಕರನ್ನು ರಂಜಿಸಲು ಬಿಟಿಎಸ್ ತಂಡ, ಜಸ್ಟಿನ್ ಬೈಬರ್ , ಶಕೀರಾ ಸೇರಿದಂತೆ ವಿಶ್ವದ ಪ್ರಸಿದ್ಧ ಸಂಗೀತಗಾರರು ಮತ್ತು ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ
ಭಾರತದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಜೀ 5ನಲ್ಲಿ ವೀಕ್ಷಿಸಬಹುದು.








