ಮುಂಬೈ:ಜಪಾನ್ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಹಾಗೂ ಡ್ರಾ ಪಟ್ಟಿ ಪ್ರಕಟಗೊಂಡಿದ್ದು, ಪುರುಷ ಹಾಗೂ ಮಹಿಳೆ ಎರಡೂ ವಿಭಾಗದಲ್ಲಿಯೂ ಹಾಲಿ ಚಾಂಪಿಯನ್ ಭಾರತ ತಂಡ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. ಏಷ್ಯನ್ ಗೇಮ್ಸ್ನ ಪುರುಷರ ಮತ್ತು
ಮಹಿಳೆಯರ ಇವೆರಡೂ ವಿಭಾಗಗಳ ಪಂದ್ಯಾವಳಿಗಳು ಟಿ20 ಮಾದರಿಯಲ್ಲಿ ಐಚಿ ಪ್ರಿಫೆಕ್ಚರ್ನಲ್ಲಿರುವ ಕೊರೋಗಿ ಅಥ್ಲೆಟಿಕ್ ಪಾರ್ಕ್ನಲ್ಲಿ ನಡೆಯಲಿವೆ.
ಪುರುಷರ ವಿಭಾಗದಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಪಂದ್ಯಾವಳಿಯು ಸೆಪ್ಟೆಂಬರ್ 24ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ.ನೇರ ಕ್ವಾರ್ಟರ್ ಫೈನಲ್ ಪಡೆದ ತಂಡಗಳು: ಶ್ರೇಯಾಂಕದ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ಗೆ ಅರ್ಹತೆ ಪಡೆದಿವೆ. ಬಾಕಿ ಉಳಿದ ಕ್ವಾರ್ಟರ್ ಫೈನಲ್ನ 4 ಸ್ಥಾನಗಳಿಗಾಗಿ 6 ತಂಡಗಳು ಆರಂಭಿಕ ಹಂತದಲ್ಲಿ ಸೆಣಸಾಟ ನಡೆಸಲಿವೆ. ಗ್ರೂಪ್ ‘ಎ’: ಅಫ್ಘಾನಿಸ್ತಾನ, ಜಪಾನ್, ನೇಪಾಳ.
ಗ್ರೂಪ್ ‘ಬಿ’: ಹಾಂಗ್ ಕಾಂಗ್, ಮಲೇಷ್ಯಾ, ಒಮಾನ್ ಪ್ರತೀ ಗ್ರೂಪ್ನಿಂದಲೂ ಅಗ್ರ 2ರಲ್ಲಿ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲಿವೆ. ಡ್ರಾದ ಪ್ರಕಾರ, ಈ ತಂಡಗಳು ಲೀಗ್ ಹಂತದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುವುದಿಲ್ಲ. ಹಾಗಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶ ಪಡೆದರೆ ಮಾತ್ರ, ಈ ತಂಡಗಳ ಪೈಪೋಟಿ ವೀಕ್ಷಿಸಲು ಸಾಧ್ಯ.
ಮಹಿಳೆಯರ ಕ್ರಿಕೆಟ್ ವಿಭಾಗ:
ಮಹಿಳೆಯರ ವಿಭಾಗದ ಪಂದ್ಯಗಳು ಸೆಪ್ಟೆಂಬರ್ 17ರಿಂದ 22ರವರೆಗೆ ನಡೆಯಲಿದ್ದು, ಒಟ್ಟು 8 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ನಿಂದಲೇ ತಮ್ಮ ಅಭಿಯಾನ ಆರಂಭಿಸಲಿವೆ.
ಭಾರತ vs ಜಪಾನ್
ಪಾಕಿಸ್ತಾನ vs ಥೈಲ್ಯಾಂಡ್
ಶ್ರೀಲಂಕಾ vs ಮಲೇಷ್ಯಾ
ಬಾಂಗ್ಲಾದೇಶ vs ಚೀನಾ
ಮಹಿಳೆಯರ ವಿಭಾಗದಲ್ಲೂ ಭಾರತ ತಂಡ ಜಪಾನ್ ವಿರುದ್ಧ ಗೆದ್ದರೆ, ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ ಅಥವಾ ಚೀನಾ ತಂಡವನ್ನು ಎದುರಿಸುವ ಸಾಧ್ಯತೆಯಿದೆ. ಇಲ್ಲಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ತಲುಪಿದರೆ ಮಾತ್ರ ಎದುರಾಳಿಗಳಾಗಲಿವೆ.
2023ರಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ಎರಡೂ ಕ್ರಿಕೆಟ್ ತಂಡಗಳು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದವು. ಈ ಬಾರಿಯೂ ಭಾರತದ ಉಭಯ ತಂಡಗಳು ಪದಕವನ್ನು ಉಳಿಸಿಕೊಳ್ಳುವ ಭರವಸೆ ಹೊಂದಿವೆ.








