ಲಂಡನ್: ಇಂಗ್ಲೆಂಡ್ ತಂಡವು 27 ರನ್ಗಳಿಂದ ಭಾರತ ತಂಡವನ್ನು ಮಣಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2–1ರಿಂದ ಗೆದ್ದುಕೊಂಡಿತು.ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಬೆನ್ ಡಕೆಟ್ (141; 135ಎ, 4X18, 6X1) ಹಾಗೂ ಜೋಸೆಫ್ ಜೇಕಬ್ ಬೆಥೆಲ್ (91; 93ಎ) ಅವರ ಆಟದ ಬಲದಿಂದ
ಆತಿಥೇಯ ತಂಡವು 50 ಓವರ್ಗಳಲ್ಲಿ 3 ವಿಕೆಟ್ಗಳಿಗೆ 387 ರನ್ಗಳ ಬೃಹತ್ ಮೊತ್ತ ಪೇರಿಸಿತು. ವೇಗಿ ಜಸ್ಪ್ರೀತ್ ಬೂಮ್ರಾ ಗೈರುಹಾಜರಿಯಲ್ಲಿ ಕಣಕ್ಕಿಳಿದ ಭಾರತದ ಬೌಲರ್ಗಳು ಡಕೆಟ್ ಅವರ ಪ್ರಹಾರಕ್ಕೆ ಬಸವಳಿದರು.
ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭ ಆಟಗಾರರಾದ ರೋಹಿತ್ ಶರ್ಮಾ (138; 110ಎ, 4×17, 6×5) ಹಾಗೂ ನಾಯಕ ಶುಭಮನ್ ಗಿಲ್ (77; 84ಎ) ಮೊದಲ ವಿಕೆಟ್ಗೆ 24.2 ಓವರ್ಗಳಲ್ಲಿ 147 ರನ್ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಗಿಲ್ ನಿರ್ಗಮನದ
ಬಳಿಕ ವಿರಾಟ್ ಕೊಹ್ಲಿ (74; 60ಎ) ಜೊತೆಯಾದ ರೋಹಿತ್ 113 ರನ್ ಸೇರಿಸಿದರು. ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ‘ಹಿಟ್ಮ್ಯಾನ್’ ಶತಕ ಸಿಡಿಸಿ ಸಂಭ್ರಮಿಸಿದರು. 39 ವರ್ಷ ವಯಸ್ಸಿನ ಅವರು 100ರ ಮೈಲಿಗಲ್ಲು ದಾಟಿದ ಭಾರತದ ಹಿರಿಯ ಆಟಗಾರ ಎನಿಸಿದರು.ಆದರೆ, ಎಡಗೈ ವೇಗಿ ಕರನ್ (75ಕ್ಕೆ4) ಭಾರತ ತಂಡದ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿದರು.ಇಶಾನ್ ಕಿಶನ್ (14; 12ಎ), ಶ್ರೇಯಸ್ ಅಯ್ಯರ್ (0; 3ಎ), ಅಕ್ಷರ್ ಪಟೇಲ್ (2; 3ಎ) ಕರನ್ ಬೌಲಿಂಗ್ ಎದುರು ಪೆವಿಲಿಯನ್ ಪರೇಡ್ ನಡೆಸಿದರು. ಜೋಫ್ರಾ ಆರ್ಚರ್ ಅವರು ಕೆ.ಎಲ್.ರಾಹುಲ್ (12; 8ಎ) ಅವರನ್ನು ಬೌಲ್ಡ್ ಮಾಡಿದರು. ಗಿಲ್ ಪಡೆ 50 ಓವರ್ಗಳಲ್ಲಿ 7 ವಿಕೆಟ್ಗೆ 360 ರನ್ ಗಳಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ ಡಕೆಟ್ ಮತ್ತು ಬೆಥೆಲ್ ಅವರು 192 ರನ್ ಪೇರಿಸಿದರು. ಬಳಿಕ ಜೋ ರೂಟ್ (ಅಜೇಯ 74; 48ಎ, 4X9) ಮತ್ತು ಜೋಸ್ ಬಟ್ಲರ್ (ಔಟಾಗದೆ 41; 13ಎ, 4X4, 6X3) ದೊಡ್ಡ ಮೊತ್ತವನ್ನು ಕಲೆಹಾಕಿದರು.
ಬೂಮ್ರಾ ಅವರು ಎಡಗಾಲಿನ ಮಂಡಿ ಗಾಯದಿಂದಾಗಿ ಕಣಕ್ಕಿಳಿಯ ಲಿಲ್ಲ. ಇದರಿಂದಾಗಿ ಭಾರತದ ಬೌಲಿಂಗ್ ವಿಭಾಗವು ದುರ್ಬಲವಾಗಿತ್ತು. ಪ್ರಸಿದ್ಧಕೃಷ್ಣ (69ಕ್ಕೆ2), ಅರ್ಷದೀಪ್ ಸಿಂಗ್ (10 ಓವರ್; 72ರನ್), ಪ್ರಿನ್ಸ್ ಯಾದವ್ (79ಕ್ಕೆ1) ಮತ್ತು ಗುರ್ನೂರ್ ಬ್ರಾರ್ (10 ಓವರ್; 97 ರನ್) ಅವರು ಬಹಳಷ್ಟು ದುಬಾರಿಯಾದರು.








