ನವದೆಹಲಿ:ನೀಟ್ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಸುದೀರ್ಘ ಪ್ರತಿಭಟನೆಯನ್ನು ‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದಕ್ಕೆ ಪಡೆದುಕೊಂಡಿದೆ. ಅಲ್ಲದೆ ಜಂತರ್ ಮಂತರ್ನಲ್ಲಿ ನೆರೆದಿರುವ
ಪ್ರತಿಭಟನಾಕಾರರು ಹಾಗೂ ಬೆಂಬಲಿಗರಿಗೆ ತಕ್ಷಣವೇ ಮನೆಗೆ ಹಿಂತಿರುಗುವಂತೆ ಮನವಿ ಮಾಡಿದೆ.ಶನಿವಾರ ಸಂಜೆ ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಜಿತೇಂದ್ರ ಸಿಂಗ್ ಮತ್ತು ‘ಸಿಜೆಪಿ’ ಮುಖಂಡರು ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಪ್ರಮುಖ ನಿರ್ಧಾರವನ್ನು ಪ್ರಕಟಿಸಲಾಯಿತು.
ಸಿಜೆಪಿ ವಕ್ತಾರರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಮಾತನಾಡಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯು ಸಿಜೆಪಿಯ ಪ್ರಮುಖ ಹಾಗೂ ಮೊದಲ ಬೇಡಿಕೆಯಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರವು ನೀಡಿರುವ ಇತರ ಭರವಸೆಯ ಹಿನ್ನಲೆಯಲ್ಲಿ ನಾವು ಈ ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಲಾಗುವುದು ಮತ್ತು ನೀಟ್ ಪೇಪರ್ ಲೀಕ್ ಹತಾಶೆಯಿಂದ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ನಿಯಮಾವಳಿಗಳ ಪ್ರಕಾರ ಗರಿಷ್ಠ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದರು.








