ಬೆಂಗಳೂರು:ಕೊನೆಯವರೆಗೂ ರೋಚಕತೆ ತುಂಬಿ ತುಳುಕಿದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2 ರನ್ಗಳ ರೋಚಕ ಗೆಲುವು. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದು ಪ್ಲೇಆಪ್ನ ಸನಿಹ ಬಂದಿತ್ತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ರೊಮೆರಿಯೊ ಶೆಫರ್ಡ್ ಹದಿನಾಲ್ಕು ಎಸೆತಗಳಲ್ಲಿ ಸಿಡಿಸಿದ ಅರ್ಧಶತಕ ಅಬ್ಬರದ ಬ್ಯಾಟಿಂಗ್ ನೆರವಿನಿಂದ
ಆರ್ಸಿಬಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ಗಳಿಗೆ 213 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ದಿಟ್ಟ ಹೋರಾಟ ನೀಡಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆಲುವಿನ ಸನಿಹ ಎಡವಿತು. ಚೆನ್ನೈ ಪರ ಆಯುಷ್ ಮಹಾತ್ರೆ ಹಾಗೂ ರವೀಂದ್ರ ಜಡೇಜ ಆಕರ್ಷಕ ಅರ್ಧ ಶತಕ ಸಿಡಿಸಿ ಹೋರಾಟ ನೀಡಿದರು. 17 ವರ್ಷದ ಆಯುಷ್ ಮಹಾತ್ರೆ ಕೇವಲ 48 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 94 ರನ್ ಗಳಿಸಿದರೆ, ರವೀಂದ್ರ ಜಡೇಜ 45 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 77 ರನ್ ಗಳಿಸಿ ದಿಟ್ಟ ಹೋರಾಟ ನೀಡಿದರು. ಕೊನೆಯ ಓವರ್ನಲ್ಲಿ ಚೆನ್ನೈ ಗೆಲುವಿಗೆ 13 ರನ್ ಅಗತ್ಯ ಇತ್ತು. ಆದರೆ ಕೊನೆಯ ಓವರ್ ಎಸೆದ ಯಶ್ ದಯಾಳ್ ಕೇವಲ 10 ರನ್ ನೀಡಿ, ಆರ್ಸಿಬಿಗೆ ರೋಚಕ ಗೆಲುವು ತಂದು ಕೊಟ್ಟರು.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರ್ಸಿಬಿ ಇನಿಂಗ್ಸ್ನ ಕೊನೆಯ ಎರಡು ಓವರ್ಗಳಲ್ಲಿ 54 ರನ್ಗಳ ಹೊಳೆ ಹರಿಯಲು ವೆಸ್ಟ್ ಇಂಡೀಸ್ ಆಟಗಾರ ಮಾರಿಯೋ ಶೆಫರ್ಡ್ ಕಾರಣರಾದರು. ಇದರಲ್ಲಿ ಅವರ ಪಾಲು 53 ರನ್ಗಳು.
ಶೆಫರ್ಡ್ ಕೇವಲ 14 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 53 ರನ್ ಗಳಿಸಿದರು. ಶೆಫರ್ಡ್ 378.57ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದರು.ಇನಿಂಗ್ಸ್ನ ಆರಂಭದಲ್ಲಿ ಜೇಕಬ್ ಬೆಥೆಲ್ ಮತ್ತು ವಿರಾಟ್ ಕೊಹ್ಲಿ ಅವರು ಮಿಂಚಿನ ಬ್ಯಾಟಿಂಗ್ ನಡೆಸಿದರು. ಇನಿಂಗ್ಸ್ನ ಮಧ್ಯಭಾಗದಲ್ಲಿ ಆರ್ಸಿಬಿಯ ರನ್ ಗಳಿಕೆಯ ವೇಗಕ್ಕೆ ಕಡಿವಾಣ ಬಿತ್ತು. ಇದರಿಂದ 18 ಓವರ್ಗಳಲ್ಲಿ 5 ವಿಕೆಟ್ಗಳಿಗೆ 159 ರನ್ ಗಳಿಸಿತ್ತು. ಈ ನಡುಎ 60 ರನ್ಗಳ ಅಂತರದಲ್ಲಿ 5 ವಿಕೆಟ್ ಕೂಡ ಕಳೆದುಕೊಂಡಿತ್ತು. ಆದರ ನಂತರದ ಓವರ್ನಲ್ಲಿ ಬೌಲಿಂಗ್ಗೆ ಇಳಿದ ಖಲೀಲ್, ಬೆಚ್ಚಿ ಬೀಳುವಂತೆ ಶೆಫರ್ಡ್ ಆಡಿದರು. ಕೊನೆಯ ಓವರ್ನಲ್ಲಿ ಪಥಿರಾಣ ಅವರನ್ನೂ ಶೆಫರ್ಡ್ ಬಿಡಲಿಲ್ಲ. ಪಿಚ್ ಇನ್ನೊಂದು ಬದಿಯಲ್ಲಿ ಟಿಮ್ ಡೇವಿಡ್ ಅವರು ಚಪ್ಪಾಳೆ ತಟ್ಟುತ್ತ ಶೇಫರ್ಡ್ ಆಟವನ್ನು ಆಸ್ವಾದಿಸಿದರು.
21 ವರ್ಷದ ಆಟಗಾರ ಜೇಕಬ್ ಜೊತೆಗೆ ಮೊದಲ ವಿಕೆಟ್ಗೆ 97 ರನ್ ಸೇರಿಸಿದ ವಿರಾಟ್ ಕೊಹ್ಲಿ ಆಟ ರಂಗೇರಿತು. ಅವರು ಈ ಟೂರ್ನಿಯಲ್ಲಿ ಸತತ 4ನೇ ಮತ್ತು ಒಟ್ಟಾರೆ 7ನೇ ಅರ್ಧಶತಕ ದಾಖಲಿಸಿದರು. 29 ಎಸೆತಗಳಲ್ಲಿ ಅವರು 50ರ ಗಡಿ ದಾಟಿದರು.ಅವರಿಗಿಂತ ಮುನ್ನ ಜೇಕಬ್ ಕೂಡ ಅರ್ಧಶತಕ ಪೂರೈಸಿದರು. ಫಿಲ್ ಸಾಲ್ಟ್ ಗಾಯಗೊಂಡಿದ್ದ ಕಾರಣ ಸ್ಥಾನ ಪಡೆದಿದ್ದ ಜೇಕಬ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇವರಿಬ್ಬರು ಸೇರಿ ಪವರ್ಪ್ಲೇಯಲ್ಲಿ 71 ರನ್ಗಳು ಸೇರಿದವು. ವಿರಾಟ್ ಕೊಹ್ಲಿ 33 ಎಸೆತಗಳಲ್ಲಿ ತಲಾ 5 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 62 ರನ್ ಗಳಿಸೊದರೆ, ಬೆಥೆಲ್ 33 ಎಸೆತಗಳಲ್ಲಿ ತಲಾ 8 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 55 ರನ್ ಸೂರೆಗೈದರು. 11 ಪಂದ್ಯಗಳನ್ನು ಆಡಿದ ಆರ್ಸಿಬಿ 8 ಗೆಲುವಿನೊಂದಿಗೆ 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು.