*ಡಾ.ಸುಂದರ ಕೇನಾಜೆ.
ಈ ಜನಪದ ಕುಣಿತಗಳು ಯಾವಾಗ ಹುಟ್ಟಿಕೊಂಡವು ಎನ್ನುವ ಬಗ್ಗೆ ಖಚಿತ ಮಾಹಿತಿಗಳಿಲ್ಲ. ಮನುಷ್ಯನ ಹುಟ್ಟಿನಿಂದಲೇ ಕುಣಿತಗಳೂ ಆತನ ವರ್ತನೆಯ ಭಾಗವಾಗಿ ಮೂಡಿ ಬಂದಿರಬೇಕು. ಬೇಟೆಯನ್ನೇ ಆಶ್ರಯಿಸುತ್ತಾ ಬದುಕುವ ಕಾಲದಲ್ಲೇ ವ್ಯಕ್ತಿ ಅಥವಾ ಸಮೂಹ ತಮಗೆ ಪ್ರಾಣಿ ಸಿಕ್ಕಾಗ ಆ ಸಂತೋಷವನ್ನು ಅಭಿವ್ಯಕ್ತಿಸುವ ವಿಧಾನವಾಗಿ ಕುಣಿತವನ್ನು ಬಳಸಿಕೊಂಡ ಬಗ್ಗೆ, ನಂತರ ಮಾಂಸವನ್ನು ಬೇಯಿಸುವ ಕಲೆ ಸಿದ್ಧಿಸಿಕೊಂಡು ಬೆಂಕಿಯ ಮುಂದೆ ಕುಣಿಯುವ ಅನೇಕ ದಾಖಲೆಗಳನ್ನು
ಪ್ರಾಗೈತಿಹಾಸ ನೀಡುತ್ತದೆ. ಭಾಷೆಗಿಂತಲೂ ಮುನ್ನ ಭಾವನೆಯ ಅಭಿವ್ಯಕ್ತಿಗೆ ಕುಣಿತಗಳನ್ನು ಬಳಸುವುದು ಸಾಮಾನ್ಯವಾಗಿತ್ತು. ಬೇಟೆಯ ಸಂತೋಷವೇ ಕುಣಿತಕ್ಕೆ ಕಾರಣವಾಗಿರಬೇಕೆಂದೂ ಊಹಿಸಲಾಗಿದೆ. ಬೇಟೆಯಿಂದ ಬೇಸಾಯದ ಕಡೆಗೆ ಬಂದ ಮನುಷ್ಯ ಅಲ್ಲೂ ತನ್ನ ಕಷ್ಟ, ನಷ್ಟ, ನೋವನ್ನು ಮರೆಯಲು ಹಾಗೂ ಬೇಸಾಯದ ನಂತರದ ವಿರಾಮ ಮತ್ತು ಗಳಿಕೆಯ ಕಾರಣಕ್ಕಾಗಿ ಕುಣಿತದ ಮೊರೆ ಹೋದದ್ದನ್ನೂ ಜನಪದ ಚರಿತ್ರೆ ದಾಖಲಿಸುತ್ತದೆ. ಹೀಗೆ ಜನಪದ ಕುಣಿತಗಳು ಮನುಷ್ಯ ಬದುಕಿನ ಭಾಗಗಳಾಗಿ ಸಾಗಿ ಬಂದಿವೆ.
ಮನುಷ್ಯ ತನ್ನ ಮೂಲ ಉದ್ಯಮವಾದ ಬೇಟೆಯನ್ನು ಕಡಿಮೆಗೊಳಿಸಿ ಬೇಸಾಯವನ್ನು ಅವಲಂಬಿಸಿದ ಬಳಿಕ, ಅಲೆಮಾರಿ ಜೀವನವನ್ನು ಬಿಟ್ಟು ಒಂದೆಡೆ ನೆಲೆ ನಿಲ್ಲಬೇಕಾದ ಅನಿವಾರ್ಯ ಉಂಟಾಯಿತು. ಒಂದೆಡೆ ನೆಲೆಸಿದ ಹಲವು ಕುಟುಂಬಗಳು ಸೇರಿ ಸಮಾಜ ನಿರ್ಮಾಣವಾಯಿತು. ಆಗ ಕೃಷಿಕರು ಭೂಮಿಯ ಒಡೆಯರಾದರು. ಎಲ್ಲರೂ ಒಟ್ಟಾಗಿ ದುಡಿಯುವ, ನಂತರ ಜತೆಯಾಗಿ ತಿನ್ನುತ್ತಾ ಕುಣಿಯುತ್ತಾ ಸಮಾನತೆಯ ಸಿದ್ಧಾಂತವನ್ನು ಜಾರಿಗೆ ತಂದಿದ್ದರು. ಕ್ರಮೇಣ ಭೂಮಿ ಕೆಲವರ ಪಾಲಾಗುತ್ತಾ ಬಂತು. ಕೆಲವರು ಕೃಷಿಕರಾದರೆ ಮತ್ತೆ ಹಲವರು ಕೃಷಿ ಕಾರ್ಮಿಕರಾದರು. ಕೃಷಿಕರು ಕೆಲಸ ಮಾಡಿಸುವ, ಕಾರ್ಮಿಕರು ಕೆಲಸ

ಮಾಡುವ ಮಟ್ಟಕ್ಕೆ ಸ್ಥಿತ್ಯಂತರಗೊಂಡರು. ಆಗ ಕೃಷಿಕರು ಕುಣಿಯುದನ್ನು ಬಿಟ್ಟು ನೋಡುಗರಾಗಿಯೂ ಕಾರ್ಮಿಕರು ಕುಣಿಯುವವರಾಗಿಯೂ ಬದಲಾದರು. ಪರಿಣಾಮ ಅನೇಕ ಕೃಷಿ ಕಾರ್ಮಿಕ ವರ್ಗ ತಮ್ಮ ಜನಾಂಗದಲ್ಲೇ ಹಲವು ಕುಣಿತಗಳನ್ನು ರೂಪಿಸಿಕೊಂಡು ಅದನ್ನು ಸಂದರ್ಭ ಬಂದಾಗಲೆಲ್ಲ ಜಮೀನ್ದಾರರ ಅಥವಾ ತಮ್ಮವರ ಮುಂದೆಯೇ ಪ್ರದರ್ಶಿಸುವ ಪರಂಪರೆಯನ್ನು ಬೆಳೆಸಿಕೊಂಡರು. ಹೀಗೆ ಅನೇಕ ತಳಸಮುದಾಯಗಳು ಹಲವಾರು ಕುಣಿತಗಳನ್ನು ತಮ್ಮ ಪರಂಪರೆಯ ಭಾಗವಾಗಿ ಮುಂದುರಿಸುತ್ತಲೇ ಬಂದಿದ್ದವು.
ಜನಪದ ಕಣಿತಗಳನ್ನು ಅವುಗಳ ಆಶಯಕ್ಕೆ ಹೊಂದಿಕೊಂಡು ಬೇರೆಬೇರೆ ವಿಭಾಗ ಮಾಡಲಾಗಿದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿಯೂ ಇದೆ. ಅವುಗಳಲ್ಲಿ ಫಲವಂತಿಕೆಯ ಆಶಯ ಹೊಂದಿದ ಕುಣಿತಗಳು ಸಾರ್ವತ್ರಿಕವಾಗಿ ಕಾಣಸಿಗುತ್ತವೆ. ಕರಾವಳಿಯ ಬಹುತೇಕ ಕುಣಿತಗಳ ಅಶಯವೂ ಫಲವಂತಿಕೆಯೇ ಆಗಿದೆ. ಅಂದರೆ ತಾನು ಕೃಷಿ ಕಾರ್ಮಿಕನಾದರೂ ತನ್ನ ಒಡೆಯನಿಗೆ ಫಲವನ್ನು ಬಯಸುವ, ಅದಕ್ಕಾಗಿ ಹಾರೈಸುವ ಕುಣಿತಗಳು ನಡೆಯುತ್ತವೆ. ಇದಕ್ಕೆ ಪೂರಕವಾಗಿ ಈ ಎಲ್ಲಾ ಕುಣಿತಗಳು ಭತ್ತದ ಕೊಯಿಲಿನ ಸಂದರ್ಭದಲ್ಲೇ ಪ್ರದರ್ಶನಗೊಳ್ಳುತ್ತಿದ್ದವು. ಅಂದರೆ ಏಣಿಲು (ಜೂನ್-ಒಕ್ಟೋಬರ್) ಬೆಳೆಯ ಕೊನೆಯ ಕಾಲದಲ್ಲಿ ಈ ಕುಣಿತಗಳು ನಡೆಯುತ್ತಿದ್ದವು. ಅಲ್ಲದೇ ಕುಣಿತ ನಡೆಸುವ ಎಲ್ಲಾ ಜನಾಂಗಗಳು ಕೃಷಿಕಾರ್ಮಿಕರು ಅಥವಾ ಭೂರಹಿತರೇ ಆಗಿದ್ದರು. ಬೇಸಾಯದ ಆರಂಭದಲ್ಲಿ ಇವರೇ ಭತ್ತ ಬೇಸಾಯದ ನಾಟಿ ಕಾರ್ಯದಲ್ಲಿ ಸಹಕರಿಸುತ್ತಿದ್ದರು. ಆದರೆ ಇವರಿಗೆ ಭತ್ತದ ಫಲ ಸಿಗಬೇಕಾದರೆ ಕೊಯಿಲಿನ ಪ್ರಕ್ರಿಯೆಯಲ್ಲೂ ಭಾಗವಹಿಸಬೇಕಾಗಿತ್ತು. ಹೀಗೆ

ಭಾಗವಹಿಸಿದರೂ ಸಿಗುವ ಕೂಲಿ ಸೀಮಿತವಾಗಿತ್ತು. ಈ ಕಾರಣದಿಂದ ಈ ನಾಡಿನ ತಳಸಮುದಾಯಗಳು ಫಲವನ್ನು ಪಡೆಯಲು ಫಲೋತ್ಪಾದನೆಯ ಒಳಿತಿಗಾಗಿ ಕುಣಿತವನ್ನು ನಡೆಸುತ್ತಾ ಬಂದಿದ್ದವು.
ಹೀಗೆ ಫಲವಂತಿಕೆಯ ಆಶಯವಲ್ಲದೇ ಮೇಲ್ವರ್ಗದ ಮೇಲಿನ ಪ್ರತಿಭಟನೆಯ ಸ್ವರೂಪವಾಗಿಯೂ ಇಲ್ಲಿಯ ಕೆಲವು ಕುಣಿತಗಳು ಬಳಕೆಯಾಗಿವೆ. ಮೇಲ್ವರ್ಗ ಅಥವಾ ಜಮೀನ್ದಾರಿಗಳ ದಮನಕಾರಿ ನೀತಿಯನ್ನು ತಮ್ಮದೇ ಆದ ಸಂಕೇತಗಳ ಮೂಲಕ ತಮ್ಮೊಳಗೆ ಜಾಗೃತ ರೂಪದಲ್ಲಿ ರಾತ್ರಿ ಹೊತ್ತು ಪ್ರದರ್ಶನಗೊಳಿಸುತ್ತಿದ್ದ ಕುಣಿತಗಳೂ ಇದ್ದುವು(ಈಗಲೂ ಇವೆ) ಏಣಿಲಿನ ನಂತರದ ಸುಗ್ಗಿಯ ಆರಂಭದಲ್ಲೂ ಇಂತಹಾ ಅನೇಕ ಕುಣಿತಗಳು ಪ್ರದರ್ಶನಗೊಳ್ಳುತ್ತಿದ್ದವು. ಸಾಮಾನ್ಯವಾಗಿ ಮಳೆಗಾಲದ ಅಬ್ಬರ ಮುಗಿದು ಚಳಿಗಾಲದಲ್ಲಿ ನಡೆಯುತ್ತಿದ್ದ ಈ ಜನಪದ ಕುಣಿತಗಳು ಸಂಮೃದ್ಧಿಯ ಕಾಲದಲ್ಲಿ ನಡೆಯುತ್ತಿದ್ದುದೇ ಹೆಚ್ಚು. ಇದೇ ಕಾಲದಿಂದ ಕರಾವಳಿಯಲ್ಲಿ ಭೂತಾರಾಧನೆ ಮತ್ತು ಯಕ್ಷಗಾನ ಪ್ರಾಕಾರವೂ ಆರಂಭಗೊಳ್ಳುತ್ತಿದ್ದು ಈ ಕಲಾ ಪ್ರಾಕಾರಗಳಿಗೂ ಇಲ್ಲಿಯ ಜನಪದ ಕುಣಿತಗಳಿಗೂ ನೇರ ಸಂಬಂಧ ಇದೆ.
ಕರಾವಳಿ ಕರ್ನಾಟಕದಲ್ಲಿ ಇಂತಹಾ ನೂರಾರು ಜನಪದ ಕುಣಿತಗಳಿದ್ದವು(ಕೆಲವು ಈಗಲೂ ಇವೆ) ಭತ್ತದ ಬೇಸಾಯವೇ ಪ್ರಧಾನವಾಗಿದ್ದ ಈ ಪ್ರದೇಶಗಳಲ್ಲಿ ಅನೇಕ ಸಮುದಾಯಗಳು ತಮ್ಮದೇ ಆದ ಕುಣಿತಗಳನ್ನು ರೂಪಿಸಿಕೊಂಡು, ಅವುಗಳನ್ನು ತಂಡವಾರು ಪ್ರದರ್ಶಿಸುವ ಕಲೆಯನ್ನು ಇತ್ತೀಚಿನವರೆಗೂ ಮಾಡುತ್ತಾ ಬಂದಿವೆ. ಕೆಲವು ವರ್ಷಗಳ ಹಿಂದೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ(ಜಾನಪದ ವಿದ್ವಾಂಸ ಡಾ.ಅಶೋಕ ಆಳ್ವರ ನೇತೃತ್ವದಲ್ಲಿ) ಜನಾಂಗೀಯ ಕುಣಿತಗಳ ದಾಖಲೀಕರಣವೊಂದನ್ನು(ಪನ್ನೆ ಪ್ರದೀಪ್ ಕುಮಾರ್ ರೈಯವರ ಮನೆಯಲ್ಲಿ) ಸಂಘಟಿಸಿದ್ದೆ. ಆ ಸಂದರ್ಭ ಕರಾವಳಿಯ ಸುಮಾರು ಇಪ್ಪತ್ತೆರಡು ಸಮುದಾಯಗಳ ಪ್ರಾತಿನಿಧಿಕ ತಂಡಗಳು ಈ ದಾಖಲೀಕರಣದಲ್ಲಿ ಭಾಗವಹಿಸಿದ್ದವು. ಕರಾವಳಿಯ ಮೂಲನಿವಾಸಿ ಸಮುದಾಯಗಳಾದ ನಲಿಕೆ, ಪಂಬದ, ಪರವ, ಮೊಗೇರ, ಆದಿದ್ರಾವಿಡ, ಕೊರಗ, ಮಲೆಕುಡಿಯ, ವಲಸಿಗ ಸಮುದಾಯಗಳಾದ ಮರಾಠಿ, ಬೈರ, ವಣ್ಣಾನ್, ಜತೆಗೆ ಗೌಡ ಸಮುದಾಯ ಹಾಗೂ ಇನ್ನೂ ಕೆಲವು ಈ ಜನಾಂಗೀಯ ಕುಣಿತದ ಪ್ರದರ್ಶನ ಮತ್ತು ದಾಖಲೀಕರಣದಲ್ಲಿ ಭಾಗವಹಿಸಿದ್ದವು. ಸಾರ್ವಜನಿಕವಾಗಿ ಅಪೂರ್ವವಾಗಿ ಕಂಡುಬರುವ

ಅನೇಕ ಕುಣಿತಗಳನ್ನು ದಾಖಲಿಸಿ ಅವುಗಳ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ನೀಡಲಾಗಿತ್ತು(ನೋಡಿ. ಆರ್.ಆರ್.ಸಿ ಸಂಗ್ರಹ)
ಇಂದು ಈ ಜನಪದ ಕುಣಿತಗಳು ಕಣ್ಮರೆಯಾಗಿವೆ. ಯುವಜನ ಮೇಳ, ಪ್ರತಿಭಾ ಕಾರಂಜಿಯಂತಹಾ ಸ್ವರ್ಧೆಗಳಿಗೆ ಸೀಮಿತವಾಗಿದ್ದ ಕುಣಿತಗಳೂ ತಮ್ಮ ಸ್ವರೂಪವನ್ನು ಬದಲಾಯಿಸಿವೆ. ಜನಾಂಗೀಯ ನೆಲೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಕುಣಿತಗಳಲ್ಲಿ ಮತ್ತು ಅವುಗಳಿಗೆ ಬಳಸುತ್ತಿದ್ದ ಹಿಮ್ಮೇಳ ಪರಿಕರಗಳಲ್ಲಿ ಶಾಸ್ತ್ರೀಯತೆ ಹೆಚ್ಚಾಗಿದೆ. ಕರಾವಳಿಯ ಹುಲಿ ಕುಣಿತ ಮತ್ತು ಒಂದೆರಡು ಇತರ ಕುಣಿತಗಳು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಅವಕಾಶ ಪಡೆದ ಕಾರಣದಿಂದಲೋ ಏನೋ ಅವುಗಳು ಮಾತ್ರ ಜನಪದ ಕುಣಿತಗಳು ಎನ್ನುವ ಹಂತಕ್ಕೆ ತಲುಪಿವೆ. ಒಂದು ಕಾಲದಲ್ಲಿ ನೂರಾರು ಕುಣಿತಗಳು ಕರಾವಳಿ ಮಣ್ಣನ್ನು ರಂಗೇರಿಸಿದ್ದವು. ಆದರೆ ಇಂದು ಇವು ಮಣ್ಣಲ್ಲೇ ಮಣ್ಣಾಗಿ ಹೋಗಿವೆ. ಆಧುನಿಕ ಕುಣಿತ ಮತ್ತು ವಾದ್ಯ ಮೇಳಗಳ ಮಧ್ಯೆ ಸಹಜ ಅಭಿವ್ಯಕ್ತಿಯ ರಂಗಭೂಮಿಯೊಂದು ಕಣ್ಮರೆಯಾಗುತ್ತಿದೆ. ಆ ಮೂಲಕ ಮನುಷ್ಯ ಹೆಚ್ಚು ಸಂಕೀರ್ಣವಾದ ಸ್ಥಿತಿಯೊಂದರ ಕಡೆಗೂ ಹೆಜ್ಜೆ ಹಾಕುತ್ತಿದ್ದಾನೆ. ಇದನ್ನು ತಪ್ಪು ಎನ್ನಲಾಗದ, ಹಾಗೆಂದು ಮರುಸೃಷ್ಟಿಯೂ ಅಸಾಧ್ಯವಾದ ಸ್ಥಿತಿ. ಕನಿಷ್ಠ ದಾಖಲೀಕರಣದಿಂದಲಾದರೂ ಹರಿದು ಬಂದ ಜನಪದ ಕುಣಿತಗಳನ್ನು ಮತ್ತೆ ನೋಡುತ್ತಿರಬಹುದು.

(ಡಾ.ಸುಂದರ ಕೇನಾಜೆ ಲೇಖಕರು, ಅಂಕಣಕಾರರು, ಜಾನಪದ ಸಂಶೋಧಕರು).