ಸುಳ್ಯ: ಕೆಲವು ದಿನಗಳ ಬಿಡುವಿನ ಬಳಿಕ ಶುಕ್ರವಾರ ಸುಳ್ಯದಲ್ಲಿ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನ ಉತ್ತಮ ಮಳೆ ಸುರಿದಿದ್ದು ಮಧ್ಯಾಹ್ನದ ಬಳಿಕ ಹನಿ ಮಳೆಯಾಗುತಿದೆ. ಕಳೆದ 4-5 ದಿನಗಳಿಂದ ಬಿಸಿಲಿನ ವಾತಾವರಣ ಇದ್ದು ಮಳೆ ದೂರವಾಗಿ ಸೆಕೆಯ ಅನುಭವವಾಗಿತ್ತು. ಗುರುವಾರ ರಾತ್ರಿಯಿಂದ
ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆ ಸುರಿದಿದೆ.ಕೆಲವೆಡೆ ರಾತ್ರಿ ಮಳೆ ಸುರಿದರೆ ಕೆಲವೆಡೆ ಶುಕ್ರವಾರ ಬೆಳಿಗ್ಗೆ ಮತ್ತು ಹಗಲಿನ ವೇಳೆ ಮಳೆಯಾಗಿತ್ತು. ಮಧ್ಯಾಹ್ಬದ ವೇಳೆಗೆ ಬಹುತೇಕ ಕಡೆ ಉತ್ತಮ ಮಳೆ ಸುರಿದಿದೆ. ಎಲ್ ನಿನೋ ಪ್ರಭಾವದಿಂದ ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಕೊರತೆ ಉಂಟಾಗಿದ್ದು, ಮುಂಗಾರು ಪ್ರವೇಶವಾಗಿ ಒಂದೂವರೆ ತಿಂಗಳಾದರೂ ನಿರೀಕ್ಷಿತ ಮಳೆ ಸುರಿದಿಲ್ಲ. ಇಂದಿನಿಂದ ಆಷಾಢ ಮಾಸ ಆರಂಭಗೊಂಡಿದ್ದು ಮಳೆ ಬಿರುಸುಗೊಳ್ಳುವ ಸೂಚನೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಭಾಗಗಳು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗಿದೆ.








