ಸುಳ್ಯ:ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿ ಆನೆ ಮರಿಯೊಂದು ಸಾವಿಗೀಡಾಗಿರುವ ಘಟನೆ ನಡೆದಿದೆ.ದಕ್ಷಿಣ ಕನ್ನಡ ಮತ್ತು ಕೊಡಗು ಗಡಿ ಭಾಗವಾದ ಹರ್ಲಡ್ಕ ಎಂಬಲ್ಲಿ ತೋಟದಲ್ಲಿ ಒಂದು ವರ್ಷದ ಪ್ರಾಯದ ಆನೆ ಮರಿ ಸಾವಿಗೀಡಾಗಿದೆ. ಭಾಗಮಂಡ ಮೀಸಲು ಅರಣ್ಯದಿಂದ

ಆನೆಗಳ ಹಿಂಡು ರಬ್ಬರ್ ತೋಟ ಹಾಗೂ ಇತರೆ ಕೃಷಿ ಪ್ರದೇಶಕ್ಕೆ ದಾಳಿ ಇಟ್ಟಿತ್ತು. ಗುಡ್ಡವನ್ನು ಹತ್ತಿ ಆನೆಗಳು ವಾಪಾಸು ಕಾಡಿಗೆ ಹೋಗುವಾಗ ಮರಿಯಾನೆಯು ಜಾರಿ ಬಿದ್ದಿರುವ ಸಾಧ್ಯತೆ ಇದೆ ಅಥವಾ ದೊಡ್ಡ ಆನೆಗಳ ಒಡೆತಕ್ಕೆ ಸಿಕ್ಕಿ ಮರಿಯಾನೆ ಸಾವಿಗೀಡಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.









