ನವದೆಹಲಿ:ದೇಶದಾದ್ಯಂತ ಶೇಕಡ 15ರಷ್ಟು ಮಳೆ ಕೊರತೆಯೊಂದಿಗೆ ಈ ಬಾರಿಯ ನೈರುತ್ಯ ಮುಂಗಾರು ನಿರ್ಗಮನ ಪ್ರಕ್ರಿಯೆ ಆರಂಭಗೊಂಡಿದೆ.
ಪಶ್ಚಿಮ ರಾಜಸ್ಥಾನದ ಕೆಲವು ಭಾಗದಿಂದ ಮುಂಗಾರು ನಿರ್ಗಮನ ಶನಿವಾರ ಆರಂಭವಾಗಿದ್ದು, ಮುಂಗಾರು ಅಂತ್ಯಗೊಳ್ಳುವ ಸೂಚನೆ ನೀಡಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ
ಆ ರಾಜ್ಯದ ಇನ್ನಷ್ಟು ಪ್ರದೇಶಗಳು ಸೇರಿದಂತೆ ಪಂಜಾಬ್, ಸೌರಾಷ್ಟ್ರ ಮತ್ತು ಕಛ್ನಿಂದಲೂ ನಿರ್ಗಮನಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳಂ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಪುದುಚೆರಿ ಭಾಗವು ಅತಿ ಹೆಚ್ಚು, ಅಂದರೆ ಶೇ 29ರಷ್ಟು ಮಳೆ ಕೊರತೆ ಎದುರಿಸುತ್ತಿವೆ. ಆಗಸ್ಟ್ 31ರಂದು ಹವಾಮಾನ ಇಲಾಖೆ ಬಿಡುಗಡೆ ಮಾಡಿದ್ದ
ವರದಿ ಪ್ರಕಾರ, ಆ ತಿಂಗಳಲ್ಲಿ ದೇಶದಾದ್ಯಂತ 21.3 ಸೆಂ.ಮೀ. ಮಳೆ ಸುರಿದಿದೆ. ಕಳೆದ 25 ವರ್ಷಗಳಲ್ಲಿ ಆಗಸ್ಟ್ನಲ್ಲಿ ಕನಿಷ್ಠ ಮಳೆ ಬಿದ್ದಿದೆ. ಜೂನ್ ತಿಂಗಳಲ್ಲಿ ವಾಡಿಕೆಯ 16.5 ಸೆಂ.ಮೀ. ಬದಲು 10.6 ಸೆಂ.ಮೀ. ಮಳೆ ಮಾತ್ರ ಸುರಿದಿದ್ದು, ಶೇ 35ರಷ್ಟು ಕೊರತೆ ಆಗಿದೆ. ಈ ಮುಂಗಾರು ಋತುವಿನಲ್ಲಿ ಜುಲೈ ತಿಂಗಳಲ್ಲಿ ಮಾತ್ರ ವಾಡಿಕೆಗಿಂತ (28.05 ಸೆಂ.ಮೀ ಬದಲಾಗಿ 28.33 ಸೆಂ.ಮೀ.) ತುಸು ಹೆಚ್ಚು ಮಳೆಯಾಗಿದೆ.
ಎಲ್ ನಿನೊ ಪರಿಸ್ಥಿತಿಯ ಪರಿಣಾಮ ದಿಂದಾಗಿ ಈ ಬಾರಿ ದೇಶದಾದ್ಯಂತ ಮಳೆ ಕೊರತೆಯಾಗಿದೆ. ಜೂನ್ ನಾಲ್ಕರಂದು ಕೇರಳಂ ಮೂಲಕ ಮುಂಗಾರು ಪ್ರವೇಶಿಸಿದೆ. ಜುಲೈ 9ರ ವೇಳೆಗೆ ಮುಂಗಾರು ದೇಶದಾದ್ಯಂತ ವ್ಯಾಪಿಸಿತ್ತು.ಆದರೆ ನಿರೀಕ್ಷಿತ ಮಳೆ ಬಾರದ ಕಾರಣ ಎಲ್ಲೆಡೆ ಬರಗಾಲ ಎದುರಿಸುವಂತಾಗಿದೆ








