ಸುಳ್ಯ: ಭಾರೀ ಮಳೆಯಿಂದ ಪಯಸ್ವಿನಿ ನದಿ ಉಕ್ಕಿ ಹರಿದು ತಡರಾತ್ರಿ ನದಿ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಪೆರಾಜೆಯಿಂದ ಅರಂಬೂರು ತನಕ
ನದಿ ಬದಿಯಲ್ಲಿ ಸಾಗುವ ರಾಷ್ಟ್ರೀಯ ಹೆದ್ದಾರಿಗೆ ಸಮಾನಾಂತರವಾಗಿ ನೀರಿನ ಮಟ್ಟ ಏರಿಕೆಯಾಗಿ ಅರಂಬೂರು ಭಾಗದಲ್ಲಿ ನದಿಯ ನೀರು
ಮಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿತು. ಹಲವು ಗಂಟೆಗಳ ಕಾಲ ನದಿಯ ನೀರು ತುಂಬಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿತ್ತು. ಸ್ಥಳೀಯ ಯುವಕರು, ಆಂಬುಲೆನ್ಸ್ ಚಾಲಕ ಮಾಲಕರ ಸಂಘದ ಸದಸ್ಯರು ಮತ್ತಿತರರು ಸ್ಥಳದಲ್ಲಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಬಳಿಕ ನೀರಿನ ಮಟ್ಟ ಸ್ವಲ್ಪ ಇಳಿಯಿತು.
ರಾತ್ರಿ ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ಮಳೆಗೆ ಬರೆ, ಬರೆ ಕುಸಿದು ರಸ್ತೆಗೆ ಬಿದ್ದಿತ್ತು. ಇದರಿಂದ ರಸ್ತೆಯಲ್ಲಿ ಭಾಗಷಃ ತಡೆ ಉಂಟಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ಮಣ್ಣು, ಮರ ತೆರವು ಮಾಡಲಾಯಿತು.












