ಸುಳ್ಯ:ಮಂಗಳೂರಿನಲ್ಲಿ ಸೆ.18 ರಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಬೇಡಿಕೆಯ ಪ್ರಸ್ತಾವನೆಗಳಿಗೆ ಆಧ್ಯತೆ ನೀಡುವಂತೆ ಮುಖ್ಯಮಂತ್ರಿಯವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಲಾಗಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯ ತಾಲೂಕು ಮೂಲಭೂತ ಸೌಕರ್ಯ ಕೊರತೆ ಮತ್ತು
ಮೂಲಭೂತ ಸಮಸ್ಯೆಗಳಿಂದ ಹಿಂದುಳಿದಿದೆ.ಆದುದರಿಂದ ಪ್ರಮುಖ ಬೇಡಿಕೆ ಹಾಗೂ ಪ್ರಸ್ತಾವನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಧ್ಯತೆ ನೀಡಿ ವಿಶೇಷ ಪ್ಯಾಕೇಜ್ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.ಸುಳ್ಯ ಪಟ್ಟಣ ಪಂಚಾಯತ್ನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಘೋಷಿಸಬೇಕು,ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಸುಳ್ಯ ನಗರ ಯೋಜನಾ ಪ್ರಾಧಿಕಾರವನ್ನು ಪೂರ್ಣಪ್ರಮಾಣದ ಪ್ರಾಧಿಕಾರವನ್ನಾಗಿ ಘೋಷಿಸಬೇಕು. ಸುಳ್ಯ ತಾಲೂಕಿನ
ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡಿ ಸರ್ವಋತು ರಸ್ತೆಗಳನ್ನಾಗಿ ಮಾರ್ಪಡಿಸಬೇಕು,ಸುಳ್ಯ ತಾಲೂಕು ರಬ್ಬರ್ ಬೆಲೆಯನ್ನು ಆಶ್ರಯಿಸಿರುವುದರಿಂದ ರಬ್ಬರ್ಗೆ ಸಂಬಂಧಿಸಿದ ರಬ್ಬರ್ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಸ್ಥಳೀಯ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಗೆ ಆಧ್ಯತೆ ನೀಡಬೇಕು, 110 ಕೆವಿ ವಿದ್ಯುತ್ ಲೈನ್ ಕೂಡಲೇ ಅನುಷ್ಠಾನ ಮಾಡಿ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಆಧ್ಯತೆ ನೀಡಬೇಕು.ಸುಳ್ಯ ತಾಲೂಕಿನ ಪ್ರಮುಖ ಬೆಳೆಯಾದ
ಅಡಿಕೆ ಕೃಷಿಗೆ ಬಾಧಿಸಿರುವ ಹಳದಿರೋಗ, ಎಲೆಚುಕ್ಕಿ ರೋಗ ಮತ್ತು ಇತರ ಕೃಷಿಗಳಿಗೆ ಬಾಧಿಸುವ ರೋಗ ನಿಯಂತ್ರಣಕ್ಕೆ ಸುಳ್ಯದಲ್ಲಿ ಕೃಷಿ ಸಂಶೋಧನಾ ಕೇಂದ್ರ ತೆರೆಯಬೇಕು, ಕೃಷಿಕರಿಗೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಬಂದೂಕು ಪರವಾನಗಿಯ ಕಾನೂನು ನಿಯಮಗಳನ್ನು ಸರಳೀಕರಣಗೊಳಿಸಿ. ಅರ್ಜಿ ನೀಡಿರುವ ಅರ್ಹ ರೈತರಿಗೆ ಬಂದೂಕು ಪರವಾನಗಿಯನ್ನು ನೀಡಬೇಕು,ಸುಳ್ಯ ತಾಲೂಕನ್ನು ಟೂರಿಸಂ ಹಬ್ ಆಗಿ ಪರಿವರ್ತಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮಡೋಡಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್,ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸುರೇಶ್.ಎಂ.ಎಚ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.











