ಸುಳ್ಯ:ಎಲ್ಲಾ ಭಾಷೆಗಳನ್ನು ಆರಾಧಿಸೋಣ,ಆದರೆ ಕನ್ನಡವನ್ನು ಪ್ರೀತಿಸೋಣ,ಕನ್ನಡ ನಮ್ಮೆಲ್ಲರ ಹೃದಯದ ಭಾಷೆಯಾಗಲಿ
ಎಂದು ಗಾನಗಂಧರ್ವ ಖ್ಯಾತಿಯ ಗಾಯಕ, ಸಂಗೀತ ನಿರ್ದೇಶಕರು ಹಾಗೂ ಚಲನಚಿತ್ರ ನಟರಾದ ಶಶಿಧರ ಕೋಟೆ ಆಶಯ ವ್ಯಕ್ತಪಡಿಸಿದ್ದಾರೆ. ಜೆಸಿಐ ಸುಳ್ಯ ಪಯಸ್ವಿನಿ ಮತ್ತು ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜೇಸಿಐ ಸಪ್ತಾಹ 2026 ‘ಸುಸ್ನಿಲ’ ಸಮಾರೋಪ ಸಮಾರಂಭದಲ್ಲಿ
ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಹುಟ್ಟೂರಿನ ಸನ್ಮಾನ ಅತ್ಯಂತ ಖುಷಿ ಕೊಟ್ಟಿದೆ. ಎಲ್ಲದಕ್ಕಿಂತ ಮಿಗಿಲಾದ ಸನ್ಮಾನ ಇದು ಎಂದ ಅವರು ‘ಹರಿವರಾಸನಂ’ ಹಾಡನ್ನು ಹಾಡಿ ನೆರೆದವರ ಮನ ಗೆದ್ದರು.
ಅಂಬೆಟಡ್ಕದ ಆರೋಹಿ ಎನ್ಕ್ಲೇವ್ ಸಭಾಂಗಣದಲ್ಲಿ ನಡೆದ ಸಪ್ತಾಹ ಸಮಾರೋಪ ಸಮಾರಂಭ,ಪ್ರಶಸ್ತಿ ಪ್ರದಾನ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಹಾಗೂ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು.
ಪಯಸ್ವಿನಿ ಜೇಸಿಯ ಸ್ಥಾಪಕರು ಹಾಗೂ ಸ್ಥಾಪಕ ವಲಯ ಅಧ್ಯಕ್ಷರಾಗಿದ್ದ ದಿ.ಯು.ದುಗ್ಗಪ್ಪ ಗೌಡ ಅವರ ಸ್ಮರಣಾರ್ಥ ನೀಡಲಾಗುವ ‘ಕಲಾಶ್ರೀ’ ಪುರಸ್ಕಾರವನ್ನು ಶಶಿಧರ ಕೋಟೆ ಅವರಿಗೆ ಪ್ರದಾನ ಮಾಡಲಾಯಿತು.

‘ಪಯಸ್ವಿನಿ ಶ್ರೀ’ ಪುರಸ್ಕಾರವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ. ಅವರಿಗೆ ನೀಡಿ ಗೌರವಿಸಲಾಯಿತು. ‘ಕಮಲಪತ್ರ’ ಪುರಸ್ಕಾರವನ್ನು ಜೇಸಿಐ ಸುಳ್ಯ ಪಯಸ್ವಿನಿಯ ಮಾಜಿ ಅಧ್ಯಕ್ಷ ಭೀಮರಾವ್ ವಾಷ್ಠರ್ ಅವರಿಗೆ, ‘ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿಯನ್ನು ಉಪ ತಹಶೀಲ್ದಾರ್ ಅವಿನ್ ರಂಗತ್ತಮಲೆ ಹಾಗೂ ಮ್ಯಾರಥಾನ್ ಕ್ರೀಡಾಪಟು ವಿನಯ್ ನಾರಾಲು ಅವರಿಗೆ ಪ್ರದಾನ ಮಾಡಲಾಯಿತು.
ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ಅಧ್ಯಕ್ಷತೆ ವಹಿಸಿದ್ದರು.ಜೇಸಿಐ ಸುಳ್ಯ ಪಯಸ್ವಿನಿಯ

ಮಾಜಿ ಅಧ್ಯಕ್ಷ ಸೀತಾರಾಮ ಕೇವಳ ಅಭಿನಂದನಾ ಭಾಷಣ ಮಾಡಿದರು.ಜೇಸಿಐ ಸುಳ್ಯ ಪಯಸ್ವಿನಿಯ ಸ್ಥಾಪಕ ಸದಸ್ಯ ಡಿ.ಬಿ.ಬಾಲಕೃಷ್ಣ ಸನ್ಮಾನ ನೆರವೇರಿಸಿದರು.
ಜೇಸಿಐ ವಲಯ 15ರ ಉಪಾಧ್ಯಕ್ಷ ಜಿತೇಶ್ ಪಿರೇರಾ, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮುಖ್ಯ ಅತಿಥಿಗಳಾಗಿದ್ದರು.ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಜೇಸಿಐ ಸುಳ್ಯ ಪಯಸ್ವಿನಿ ಮಾಜಿ ಅಧ್ಯಕ್ಷ ಸುರೇಶ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಪ್ತಾಹ ನಿರ್ದೇಶಕ ವಿನೋದ್ ಮೂಡಗದ್ದೆ ವರದಿ ವಾಚಿಸಿದರು.
ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಸ್ವಾಗತಿಸಿ, ಕಾರ್ಯದರ್ಶಿ ತಾರಾ ಚೂಂತಾರು,
ವಂದಿಸಿದರು.














