ಸುಳ್ಯ:ಸೆ.18 ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯ ಸಂಪುಟ ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮೊದಲ ಹೆಜ್ಜೆ.ಜಿಲ್ಲೆಯಲ್ಲಿ ನಡೆಯುವ ಐತಿಹಾಸಿಕ ಸಚಿವ ಸಂಪುಟ ಸಭೆಯು ಜಿಲ್ಲೆಯ ಜನರಿಗೆ ದೊಡ್ಡ ಭರವಸೆ ಮೂಡಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅಪಾರ
ಭೌಗೋಳಿಕ ಸಂಪತ್ತು ವಿಫುಲ ಸಂಪನ್ಮೂಲ ಇದ್ದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಿಂದ ಅದು ಸಂಪೂರ್ಣ ವಿನಿಯೋಗ ಆಗಿಲ್ಲ. ಆದುದರಿಂದ ಜಿಲ್ಲೆಯ ಸಂಪನ್ಮೂಲದ ಸದ್ಭಳಕೆಯ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗಬೇಕು. ಬಂದರು, ವಿಮಾನ ನಿಲ್ದಾಣ, ರೈಲ್ವೇ ವಲಯಗಳ ಅಭಿವೃದ್ಧಿ, ಕಾರ್ಖಾನೆಗಳ ನಿರ್ಮಾಣ, ಕರಾವಳಿ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು ಆ ಮೂಲಕ ಉದ್ಯೋಗ ಸೃಷ್ಠಿ, ಆರ್ಥಿಕ ಅಭಿವೃದ್ಧಿ, ಶಿಕ್ಷಣ ಕ್ಷೇತ್ರದ ಬೆಳವಣಿಗೆ ಆಗಬೇಕು. ನಮ್ಮ ಭಾಷೆ, ಸಂಸ್ಕೃತಿ, ಕಲೆಗಳು ದೇಶ ವಿದೇಶಗಳಲ್ಲಿ ಬೆಳಗುವಂತಾಗಬೇಕು. ಜಿಲ್ಲೆಯ
ರಸ್ತೆ, ವಿದ್ಯುತ್ ಸೇರಿತೆ ಮೂಲಭೂತ ಅಭಿವೃದ್ಧಿಯ ಜೊತೆಗೆ ವಿದೇಶಿ ಹೂಡಿಕೆಗೆ ಅವಕಾಶ ಒದಗಿ ಬರಬೇಕು. ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ಮಹತ್ತರ ಬೆಳವಣಿಗೆಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯಲ್ಲಿ ನೀಲಿ ನಕಾಶೆ ತಯಾರಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಮತ್ತು ಹೂಡಿಕೆಗಳು ಸಾಧ್ಯವಾಗಲು ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದದ ವಾತಾವರಣ ಸೃಷ್ಟಿಯಾಗಬೇಕು. ಅಭಿವೃದ್ಧಿಗೆ ಪೂರಕವಾದ ರಾಜಕೀಯ ಸಾಧ್ಯವಾಗಬೇಕು ಎಂದರು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆ ಭರವಸೆ ಮೂಡಿಸಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಕಾಂಗ್ರೆಸ್ ಕಿಶಾನ್ ಘಟಕದ ಅಧ್ಯಕ್ಷ ಸುರೇಶ್.ಎಂ.ಎಚ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.











