ಸುಳ್ಯ: ಇತರ ಎಲ್ಲಾ ತಾಲೂಕಿನಲ್ಲಿ ಮಳೆಗಾಲಕ್ಕೆ ಮುನ್ನ ಲೋಕೋಪಯೋಗಿ ರಸ್ತೆಗಳ ಬದಿಯ ಚರಂಡಿ ದುರಸ್ತಿ ನಡೆಸಲಾಗಿದ್ದರೆ, ಸುಳ್ಯ ತಾಲೂಕಿನಲ್ಲಿ ಮಾತ್ರ ಯಾಕೆ ರಸ್ತೆ ಬದಿಯ ಚರಂಡಿ ದುರಸ್ತಿ ನಡೆಸಲಾಗುತ್ತಿಲ್ಲ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಸುಳ್ಯ ತಾಲೂಕು ಪಂಚಾಯತ್ ನಲ್ಲಿ ನಡೆದ ತಾಲೂಕು ಮಟ್ಟದ ಪ್ರಾಕೃತಿಕ ವಿಕೋಪ ತಡೆ ಕುರಿತ ಸಭೆಯಲ್ಲಿ
ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು.
ಚರಂಡಿ ಇಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತಿದೆ. ಎಲ್ಲಾ ರಸ್ತೆ ಬದಿಯ ಚರಂಡಿಗಳನ್ನು ದುರಸ್ತಿ ಮಾಡಿ ಪೋಟೂ ಸಮೇತ ವರದಿ ಸಲ್ಲಿಸಬೇಕು ಎಂದು ಎಸಿಯವರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗೆ ಆದೇಶ ನೀಡಿದರು. ಪೈಪ್ ಅಳವಡಿಸಲು, ಕೇಬಲ್ ಹಾಕಲು ಎಂದು ಲೋಕೋಪಯೋಗಿ ರಸ್ತೆಗಳನ್ನು ಕಡಿದು ಸರಿಯಾಗಿ ದುರಸ್ತಿ ಮಾಡದ ಬಗ್ಗೆ ಶಾಸಕರು ಪ್ರಶ್ನಿಸಿದರು. ರಸ್ತೆ ಕಡಿದು ಹಾಕಿ ಸರಿಯಾಗಿ ಮುಚ್ಚದ ಬಗ್ಗೆ ಕ್ರಮ ಕೈಗೊಳ್ಳಿ ಎಂದು
ಶಾಸಕರು ಲೋಕೋಪಯೋಗಿ ಇಂಜಿನಿಯರ್ಗೆ ಸೂಚಿಸಿದರು.
ಮಳೆಗಾಲದ ಸಂದರ್ಭದಲ್ಲಿ ಅಧಿಕಾರಿಗಳು ಕೇಂದ್ರ ಸ್ಥಾನವನ್ನು ಬಿಟ್ಟು ಹೊರಗೆ ಹೋಗಬಾರದು.ಪ್ರಾಕೃತಿಕ ವಿಕೋಪ ವಿಚಾರದಲ್ಲಿ ಯಾರೂ ನಿರ್ಲಕ್ಷ್ಯ ವಹಿಸಬಾರದು. ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಫೋನ್ ಮಾಡಿದರೂ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕರು ಹಾಗೂ ಉಪವಿಭಾಗಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅಪಾಯಕಾರಿ ಮರಗಳಿದ್ದರೆ ಪರಿಶೀಲನೆ ನಡೆಸಿ ತೆರವು ಮಾಡಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಎಚ್ಚರ ವಹಿಸಬೇಕು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಫಾಗಿಂಗ್ ಮಾಡಲು, ಸೊಳ್ಳೆ ನಿರ್ಮೂಲನೆಗೆ ಆದ್ಯತೆ ನೀಡಬೇಕು, ಕುಡಿಯುವ ನೀರು ಶುದ್ಧವಾಗಿರಬೇಕು, ಟ್ಯಾಂಕ್ಗಳನ್ನು ಸ್ವಚ್ಛ ಮಾಡಬೇಕು ಎಂದು ಎಸಿಯವರು ಸೂಚಿಸಿದರು.
ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು, ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಸೂಚಿಸಿದರು.
ತಹಶೀಲ್ದಾರ್ ಮಂಜುನಾಥ್ ಜಿ, ಇ.ಒ. ರಾಜಣ್ಣ ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು.