*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಹೇಳಿ ಕೇಳಿ ಇದೀಗ ಬೆಲೆ ಏರಿಕೆಯದ್ದೇ ಸುದ್ದಿ. ಪೆಟ್ರೋಲ್, ಡೀಸೆಲ್ ದರ ಏರಿಕೆ ನಿನ್ನೆಯಿಂದ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದರೆ,ಇತ್ತ ಜನರ ದಿನ ನಿತ್ಯ ಅಗತ್ಯದ ಆಹಾರ ವಸ್ತುಗಳ ಬೆಲೆ ಸದ್ದಿಲ್ಲದೆ ಏರುತಿದೆ. ಬೆಲೆ ಏರಿಕೆಯಿಂದ ಯಾವುದೇ ವಸ್ತುವನ್ನೂ ಮುಟ್ಟುವಂತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ತರಕಾರಿ, ಮೀನು, ಮಾಂಸ ಖರೀದಿಸುವ ಸಾಮಾನ್ಯ ಕುಟುಂಬದ ಖರ್ಚು ತಿಂಗಳಲ್ಲಿ ದುಪ್ಪಟ್ಟಾಗಿದೆ. ರಾಕೆಟ್ ವೇಗದಲ್ಲಿ ಏರುತ್ತಿರುವ ದರದಿಂದ ಗ್ರಾಹಕರ ಕೈ ಸುಡುತ್ತಿದ್ದು ಯಾವುದೂ

ಮುಟ್ಟಂಗಿಲ್ಲ ಎಂದು ಜನರು ಹೇಳುತ್ತಿದ್ದಾರೆ.ತರಕಾರಿ, ಕೋಳಿ, ಮೀನು ಹೀಗೆ ಎಲ್ಲಾ ವಸ್ತುಗಳ ದರ ದುಬಾರಿಯಾಗಿದ್ದು ಜನ ಸಾಮಾನ್ಯರ ‘ಡೈನಿಂಗ್ ಟೇಬಲ್’ ಸಿಕ್ಕಾ ಪಟ್ಟೆ ಕಾಸ್ಟ್ಲಿ ಆಗುತಿದೆ.ಯಾವುದು ಖರೀದಿಸಬೇಕು.. ಯಾವುದು ತಿನ್ನಬೇಕು..ಯಾವುದು ಬಿಡಬೇಕು ಎಂಬ ಪರಿಸ್ಥಿತಿ ಉಂಟಾಗಿದೆ.
ನಾಗಾಲೋಟದಲ್ಲಿ ತರಕಾರಿ ಬೆಲೆ:
ಕೆಲವೇ ವಾರಗಳ ಅಂತರದಲ್ಲಿ ಎಲ್ಲಾ ತರಕಾರಿಗಳ ಬೆಲೆ ಎರಡು ಪಟ್ಟು, ಮೂರು ಪಟ್ಟು ಜಾಸ್ತಿಯಾಗಿದೆ.30 ರೂ ಇದ್ದ ಈರುಳ್ಳಿ ದರ 50ಕ್ಕೆ ಜಿಗಿದಿದೆ.40 ರೂ ಇದ್ದ ಟೊಮೆಟೋ 70-80ಕ್ಕೆ ಏರಿದೆ. 20-30 ರೂ ಇದ್ದ ಸೌತೆ 50ಕ್ಕೆ, 50ರೂ ಇದ್ದ ಅಲಸಂಡೆ 80ಕ್ಕೆ, 60 ರೂ ಇದ್ದ ಬೀನ್ಸ್ 160ರ ಗಡಿ ದಾಟಿದೆ. ಕೇವಲ 30 ರೂಗೆ ಕೆಜಿ ತೂಗುತ್ತಿದ್ದ ಹಾಲುಗೆಡ್ಡೆ 50ಕ್ಕೆ, ಕ್ಯಾರೆಟ್ 60ರಿಂದ 80ಕ್ಕೆ ಏರಿದರೆ 60 ರೂ ಇದ್ದ ಕೊತ್ತಂಬರಿ ಸೊಪ್ಪು ನಾಲ್ಕು ಪಟ್ಟು ಜಾಸ್ತಿಯಾಗಿ 250 ಆಗಿದೆ. 80ರೂ ಇದ್ದ ನುಗ್ಗೆಬಕೋಲು 160ಕ್ಕೆ ಏರಿ ದುಪ್ಪಟ್ಟಾಗಿದೆ. ಬೆಳ್ಳುಳ್ಳಿ 160ರಿಂದ 250 ಆಗಿದೆ. 40 ರೂ ಇದ್ದ ಕ್ವಾಲಿಫ್ಲವರ್ 70 ಆದರೆ, ಹಸಿ ಮೆಣಸಿನ ಕಾಯಿ ದರ 60 ರಿಂದ 120ಕ್ಕೆ ಏರಿದೆ. ಹೀಗೆ ಪ್ರತಿಯೊಂದು

ತರಕಾರಿ ಬೆಲೆಯೂ ಸಿಕ್ಕಾಪಟ್ಟೆ ಏರಿದೆ. ಕಳೆದ ಒಂದು ತಿಂಗಳಿನಿಂದ ತರಕಾರಿ ದರ ತೀವ್ರ ಏರಿಕೆಯ ಹಾದಿಯಲ್ಲಿದ್ದು ಕಳೆದ ಒಂದು ವಾರದಲ್ಲಿ ಭಾರೀ ಏರಿಕೆ ಕಂಡಿದೆ. ಉತ್ತಮ ಗುಣಮಟ್ಟದ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ ಎಂಬ ದೂರುಗಳೂ ಇವೆ. ಮಳೆ ಹಾಗೂ ರೋಗಬಾಧೆ ಕಾರಣದಿಂದ ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳು ಮಾರುಕಟ್ಟೆಗೆ ತರಕಾರಿ ಪೂರೈಕೆ ಕುಸಿಯಲು ಕಾರಣವಾಗಿದೆ. ಹಸಿರು ತರಕಾರಿ, ಸೊಪ್ಪು, ಬೀನ್ಸ್ ಟೊಮೆಟೋ ಬೆಲೆ ಏಕಾಏಕಿ ಏರಿಕೆಯಾಗಿದೆ. ವಾರದ ಹಿಂದೆ ಮಾರುಕಟ್ಟೆಗಳಲ್ಲಿ ಟೊಮೇಟೊ ಬೆಲೆ ಕೆಜಿಗೆ 40 ರೂವರೆಗೆ ಇತ್ತು. ಆದರೆ ಈಗ 70-80 ಕ್ಕೆ ಏರಿಕೆಯಾಗಿದೆ. ದಿನಬಳಕೆಯ ತರಕಾರಿಯ ಬೆಲೆಯೇರಿಕೆ ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಟೊಮೆಟೊ ಸೇರಿದಂತೆ ತರಕಾರಿ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಗಾಂಧಿನಗರದ ಸೂಪರ್ ವೆಜಿಟೇಬಲ್ನ ಯಾಹ್ಯಾ.

ಮೀನು ಸಿಗುತ್ತಿಲ್ಲ:
ತರಕಾರಿ ಬೆಲೆ ಏರಿದರೆ ಮೀನು ತಿನ್ನುವ ಎಂದರೆ ಈಗ ಮೀನಿನ ಲಭ್ಯತೆಯೂ ಕಡಿಮೆಯಾಗಿದೆ. ಮಳೆಗಾಲ ಆರಂಭ ಆಗಿ ಮೀನುಗಾರಿಕಾ ಬೋಟ್ಗಳು ಆಳ ಸಮುದ್ರಕ್ಕೆ ಹೋಗದ ಕಾರಣ ಈಗ ಮೀನಿನ ಲಭ್ಯತೆ ಕಡಿಮೆಯಾಗಿದೆ. ಅಲ್ಪ ಸ್ವಲ್ಪ ಮೀನು ಮಾರುಕಟ್ಟೆಗೆ ಬಂದರೂ ಬೇಡಿಕೆ ಹೆಚ್ಚು, ದರವೂ ದುಪ್ಪಟ್ಟು.ಬೂತಾಯಿ ಮೀನಿಗೆ ಕೆಜಿಗೆ 240-250, ಬಂಗುಡೆಗೆ 260ರಿಂದ 300 ರೂ ತನಕ ಇರುತ್ತದೆ. ಇದು ಒಂದೆರಡು ಮೀನಿನ ಕಥೆ ಅಲ್ಲಾ. ಎಲ್ಲಾ ಮೀನುಗಳ ಲಭ್ಯತೆ ಕಡಿಮೆ ಇರುವ ಕಾರಣ ಎಲ್ಲಾ ಮೀನುಗಳೂ ವೇರಿ ಕಾಸ್ಟ್ಲಿ..!

ಕೋಳಿ ಮಾಂಸ ದುಬಾರಿ:
ತರಕಾರಿ, ಮೀನಿನಂತೆ ಕೋಳಿ ಮಾಂಸದ ದರವೂ ಏರು ಗತಿಯಲ್ಲಿಯೇ ಇದೆ. ಕಳೆದ ಕೆಲವು ತಿಂಗಳಿನಿಂದ ಕೋಳಿ ದರ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಕೆಜಿಗೆ 110ರ ಆಸುಪಾಸಿನಲ್ಲಿದ್ದ ಕೋಳಿ ದರ ಹಲವು ತಿಂಗಳಿನಿಂದ 170-180 ಇದೆ. ಕೋಳಿಯ ಮಾಂಸದ ದರ 280-290 ರ ಸುತ್ತಲೇ ಗಿರಕಿ ಹೊಡೆಯುತ್ತಿದೆ.
ಹೀಗೆ ಪ್ರತಿಯೊಂದು ಆಹಾರ ವಸ್ತುವೂ ತೀವ್ರ ಗತಿಯಲ್ಲಿ ಬೆಲೆ ಏರಿಕೆ ಆಗಿರುವುದರಿಂದ ಜನರ ಜೇಬು ಖಾಲಿಯಾಗುತ್ತಿದೆ. ತರಕಾರಿ, ಮೀನು, ಕೋಳಿ ಖರೀದಿಯ ಖರ್ಚು ದುಪ್ಪಟ್ಟಾಗುತಿದೆ. ಸಾಮಾನ್ಯವಾಗಿ ತರಕಾರಿ, ಮೀನು, ಕೊಳಿ ಎಂದು ತಿಂಗಳಲ್ಲಿ 1000-1500 ಖರ್ಚು ಆಗುತ್ತಿದ್ದ ಒಂದು ಸಾಮಾನ್ಯ ಕುಟುಂಬದ ಬಜೆಟ್ ದುಪ್ಪಟ್ಟಾಗಿ 3,000 ವರೆಗೆ ಏರುತಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.