ನವದೆಹಲಿ:ಪಾಕಿಸ್ತಾನದ ದಾಳಿ ಯತ್ನಗಳಿಗೆ ಭಾರತೀಯ ಸೇನೆ ಸೂಕ್ತ ತಿರುಗೇಟು ನೀಡುತ್ತಿದೆ ಮತ್ತು ನೀಡಲಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಹಾಗೂ ಭಾರತೀಯ ಸೇನೆ ತಿಳಿಸಿದೆ. ಶುಕ್ರವಾರ ರಾತ್ರಿ ಕೂಡ ಭಾರತದ 26 ಸ್ಥಳಗಳ ಮೇಲೆ ಪಾಕಿಸ್ತಾನ ಡ್ರೋಣ್, ಕ್ಷಿಪಣಿ ದಾಳಿಗೆ ಪ್ರಯತ್ನಿಸಿತ್ತು. ಸೇನಾ ನೆಲೆ, ಆಸ್ಪತ್ರೆ, ಶಾಲೆಗಳ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಅದನ್ನು ತಡೆದು, ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ
ಪ್ರತ್ಯುತ್ತರ ನೀಡಿದೆ ಎಂದು ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಭಾರತದ ಎಲ್ಲಾ ವಾಯುನೆಲೆಗಳು ಸುರಕ್ಷಿತವಾಗಿದೆ ಎಂದ ಅವರು ಭಾರತದ ವಾಯುನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂಬ ಪಾಕಿಸ್ತಾನದ ಹೇಳಿಕೆಗಳು ಸುಳ್ಳು, ಭಾರತದ ಎಲ್ಲಾ ವಾಯುನೆಲೆಗಳು ಸುರಕ್ಷಿತವಾಗಿವೆ ಎಂದು ದೃಢಪಡಿಸಿದರು. ಪಾಕಿಸ್ತಾನವು ನಾಗರಿಕರನ್ನು, ಆಸ್ಪತ್ರೆಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ, ಪಾಕಿಸ್ತಾನದ ಎಲ್ಲ ದಾಳಿಗಳನ್ನು
ತಡೆಯಲಾಗಿದೆ ಎಂದು ಮಾಹಿತಿ ನೀಡಿದರು. ಪಾಕಿಸ್ತಾನದ ವಾಯುನೆಲೆಗಳ ಹಾಗೂ ರಾಡಾರ್ ಬೇಸ್ಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ ಧ್ವಂಸ ಮಾಡಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ದಾಳಿ, ಪ್ರತಿ ದಾಳಿ ತೀವ್ರಗೊಂಡಿರುವ ಸಂದರ್ಭದಲ್ಲೇ ಅನೇಕ ಸುಳ್ಳು ಸುದ್ದಿಗಳೂ ಹರಿದಾಡುತ್ತಿವೆ. ಅದರಲ್ಲಿಯೂ ಪಾಕಿಸ್ತಾನ ಕಡೆಯಿಂದ ಅನೇಕ ಸುಳ್ಳಿನ ಸರಮಾಲೆಯನ್ನೇ ಹರಿಯಬಿಡಲಾಗುತ್ತಿದೆ. ಅವುಗಳಿಗೆಲ್ಲ ಸುಳ್ಳು ಎಂದು ಭಾರತ ವಿದೇಶಾಂಗ ಇಲಾಖೆ ಸ್ಪಷ್ಟ ಪಡಿಸಿದೆ.
ಶ್ರೀನಗರ, ಅವಂತಿಪುರದಲ್ಲಿ ಆಸ್ಪತ್ರೆ, ಶಾಲೆಯನ್ನು ಗುರಿಯಾಗಿಸಿ ದಾಳಿ ನಡೆದಿದ್ದು, ಅದನ್ನು ಹಿಮ್ಮೆಟ್ಟಿಸಿದ್ದೇವೆ. ಪಾಕಿಸ್ತಾನ ವಾಯು ಮಾರ್ಗಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಹೇಳಿದರು. ಭಾರತ ಉದ್ವಿಗ್ನತೆಯನ್ನು ಬಯಸುವುದಿಲ್ಲ, ಹಾಗೆಂದು ದಾಳಿ ಮಾಡಿದಾಗ ಸುಮ್ಮನಿರುವುದೂ ಇಲ್ಲ ಎಂದು ಅವರು ಹೇಳಿದರು.