ಸುಳ್ಯ:ಸುಳ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಶಾಸಕರಿಗೆ, ಎಸಿಗೆ, ಡಿಸಿಗೆ ಕರೆ ಬರುತ್ತಿದೆ. ಜನರ ಸಮಸ್ಯೆಯ ಬಗ್ಗೆ ಮೆಸ್ಕಾಂ ಸ್ಪಂದಿಸದ ಕಾರಣ ಈ ರೀತಿ ಆಗುತಿದೆ. ಯಾವುದೇ ವಿದ್ಯುತ್ ಸಮಸ್ಯೆಗೆ ಮೆಸ್ಕಾಂ ಸೂಕ್ತವಾಗಿ ಸ್ಪಂದಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರು ಸಹಾಯಕ ಕಮೀಷನರ್ ಜುಬಿನ್ ಮೊಹಾಪಾತ್ರ ಖಡಕ್ ಆದೇಶ ನೀಡಿದ್ದಾರೆ.ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಾಕೃತಿಕ ವಿಕೋಪ ತಡೆ ಕುರಿತ
ಪೂರ್ವಭಾವಿ ಸಭೆಯಲ್ಲಿ ಈ ಸೂಚನೆ ನೀಡಿದ್ದಾರೆ. ವಿದ್ಯುತ್ ಸಮಸ್ಯೆಯ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಸುಳ್ಯ ತಾಲೂಕಿನಲ್ಲಿ ನಿರಂತರ ವಿದ್ಯುತ್ ಕಡಿತ ಸಮಸ್ಯೆಯ ಬಗ್ಗೆ ದೂರುಗಳು ಬರುತಿದೆ. ಗ್ರಾಮೀಣ ಭಾಗದಲ್ಲಿ ವಾರಗಟ್ಟಲೆ ವಿದ್ಯುತ್ ಕಡಿತ ಆಗಿರುವ ಬಗ್ಗೆ ದೂರುಗಳಿವೆ.
ಅದು ಆಗಬಾರದು ಕೂಡಲೇ ಸ್ಪಂದಿಸಿ ಸಮಸ್ಯೆಗೆ ಪರಿಹಾರ ಹುಡುಕಬೇಕು. ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಕಮೀಷನರ್ ಸೂಚನೆ ನೀಡಿದರು.
ತಾಲೂಕಿನಲ್ಲಿ ವಿದ್ಯುತ್ ಸರಬರಾಜಿಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ವಾರದಲ್ಲಿ ವರದಿ ಸಲ್ಲಿಸುವಂತೆ ಅವರು ಮೆಸ್ಕಾಂಗೆ ಆದೇಶ ನೀಡಿದರು. ವಿದ್ಯುತ್ ಸರಬರಾಜಿಗೆ ಕೈಗೊಂಡ ಕ್ರಮಗಳು, ಇರುವ ಉಪಕರಣ, ಗ್ಯಾಂಗ್ಮೆನ್, ಲೈನ್ ಮೆನ್, ಸಿಬ್ಬಂದಿಗಳು ಹೀಗೆ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಅನುಪಾಲನಾ ವರದಿ ಸಲ್ಲಿಸುವಂತೆ ಎಸಿಯವರು ಸೂಚಿಸಿದರು. ತಾಲೂಕು ಕಂಟ್ರೋಲ್ ರೂಂಗೆ ಒಬ್ಬರು ಮೆಸ್ಕಾಂ ಸಿಬ್ಬಂದಿ ನೇಮಕ ಮಾಡಬೇಕು. ವಿದ್ಯುತ್ ಸಮಸ್ಯೆ ಕುರಿತು ಯಾವುದೇ ದೂರು ಬಂದರೂ ಕೂಡಲೇ ಸ್ಪಂದಿಸಿ, ಸಮಸ್ಯೆ ಪರಿಹಾರ ಮಾಡಬೇಕು ಜೊತೆಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ವಿದ್ಯುತ್ ಸಮಸ್ಯೆ ಕುರಿತು ಮುಂದೆ ಯಾವುದೇ ದೂರುಗಳು ಬರಬಾರದು ಎಂದು ಎಸಿಯವರು ಖಡಕ್ ಸೂಚನೆ ನೀಡಿದರು.
ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಪರೀಕ್ಷಾರ್ಥ ಐಎಫ್ಎಸ್ ಅಧಿಕಾರಿ ಅಕ್ಷಯ್ ಪ್ರಕಾಶ್ಕರ್ ಉಪಸ್ಥಿತರಿದ್ದರು.