ಸುಳ್ಯ:ರಾಷ್ಟ್ರೀಯತೆ, ಭಾವೈಕ್ಯತೆ, ಸಹಭಾಳ್ವೆ ಧ್ಯೇಯದೊಂದಿಗೆ ಕಾರ್ಯಾಚರಿಸಲು ಸಂವಿಧಾನದ ಆಶಯಗಳೊಂದಿಗೆ ಕಾರ್ಯಕ್ರಮಗಳನ್ನು ಸಂಘಟಿಸಲು ಪ್ರಜಾಧ್ವನಿ ಕರ್ನಾಟಕ ಎಂಬ ಹೊಸ ಸಂಘಟನೆಯನ್ನು ರೂಪಿಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಸಂಚಾಲಕ ಗೋಪಾಲ್ ಪೆರಾಜೆ ನಾಗರಿಕ ಸಮಾಜದ ನಡುವೆ ಕೊಂಡಿಯಾಗಲು ಪ್ರಜಾಧ್ವನಿ ಕರ್ನಾಟಕ ಎಂಬ ಸಂಘಟನೆ ಜನ್ಮ ತಾಳಿದೆ. ಸಂವಿಧಾನ ಪೀಠಿಕೆಯಲ್ಲಿನ ಅಂಶಗಳು ಮತ್ತು
ದೇಶದ ಅಸ್ಮಿತೆಗಳ ಸಂರಕ್ಷಣೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಬಗ್ಗೆ ಹೊಸ ಪೀಳಿಗೆಯಲ್ಲಿ ರಾಷ್ಟ್ರ ಪ್ರೇಮ ಹುಟ್ಟುವಂತೆ ಮಾಡಿ ಭಾರತೀಯರು ಎನ್ನುವ ಒಗ್ಗಟ್ಟು ಸೃಷ್ಟಿಸುವ ಕಾರ್ಯಚಟುವಟಿಕೆಗಳು, ಪ್ರಜಾಧ್ವನಿ ಸಂಘಟನೆಯ ಮೂಲ ಉದ್ದೇಶವಾಗಿರಲಿದೆ.
ಇತ್ತೀಚಿನ ದಿನಗಳಲ್ಲಿ ಸಮಾಜದ ಮಧ್ಯೆ ಹುಟ್ಟಿಕೊಂಡಿರುವ ವೈ ಮನಸ್ಸು ಅಪನಂಬಿಕೆ ಮತ್ತು ಇದರಿಂದ ಸೃಷ್ಟಿಯಾಗಿರುವ ಸಾಮಾಜಿಕ ಮೌಲ್ಯಗಳ ಕುಸಿತ, ಇವು ರಾಷ್ಟ್ರದ ಏಕತೆಯ ಮೇಲೆ ಕಪ್ಪು ಛಾಯೆಯನ್ನು ಮೂಡಿಸಿದೆ. ಈ ಕರಿಛಾಯೆಯಿಂದ ಹೊರಬರುವ ಕಾರ್ಯಕ್ರಮಗಳನ್ನು

ಸಂಘಟಿಸುವುದು ರಾಷ್ಟ್ರೀಯ ಭಾವೈಕ್ಯತೆಯನ್ನು ಭಾರತೀಯ ಸಮಾಜವನ್ನು ರೂಪಿಸುವುದು ಸಂಘಟನೆಯ ಉದ್ದೇಶವಾಗಿದೆ. ಮುಂದಿನ ಪೀಳಿಗೆಯ ನೆಮ್ಮದಿಯ ಬದುಕಿಗಾಗಿ ಸಮಾಜದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಲಿದೆ.ಕನ್ನಡ ರಾಜ್ಯೋತ್ಸವ ದಿನವಾದ ಈ ವರ್ಷದ ನವೆಂಬರ್.1 ರಂದು ಸಂಪಾಜೆಯಲ್ಲಿ ಪ್ರಜಾಧ್ವನಿ ಲಾಂಛನ ಬಿಡುಗಡೆಯೊಂದಿಗೆ ಪ್ರಜಾಧ್ವನಿ ಸಂಘಟನೆಯು ಉದ್ಘಾಟನೆಗೊಂಡಿರುತ್ತದೆ.ಈಗಾಗಲೇ ತಾಲೂಕು ಜಿಲ್ಲೆಯನ್ನು ಮೀರಿ ರಾಜ್ಯಮಟ್ಟದಲ್ಲಿ ವಿಸ್ತರಿಸುವ ಹಂತಕ್ಕೆ ಪ್ರಜಾಧ್ವನಿ ಬೆಳೆಯಲು ಮುಂದಡಿಯಿಡುತ್ತಿದೆ ಎಂದು ಅವರು ಹೇಳಿದರು.
ಸಂಘಟನೆಯ ಸದಸ್ಯರಾದ ಅಶೋಕ್ ಎಡಮಲೆ, ಕೆ.ಎಸ್.ಉಮ್ಮರ್ ಮಾತನಾಡಿದರು.ಸದಸ್ಯರಾದ ಪ್ರವೀಣ್ ಮುಂಡೋಡಿ, ವಸಂತ ಪೆಲ್ತಡ್ಕ,
ಮಂಜುನಾಥ್ ಮಡ್ತಿಲ, ಮಹೇಶ್ ಬೆಳ್ಳಾರ್ಕರ್,ಕರುಣಾಕರ ಪಲ್ಲತ್ತಡ್ಕ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.