ಬೆಂಗಳೂರು: ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಇಂದು ಸಿಎಂ ಸಿದ್ದರಾಮಯ್ಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ರೈತರಿಗೆ ಪ್ರತಿದಿನ ಮೂರು ಪಾಳಿಗಳಲ್ಲಿ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಹಾಗೂ
ಲೋಡ್ ಶೆಡ್ಡಿಂಗ್ ಆಗದಂತೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ವಿದ್ಯುತ್ಗೆ ಬೇಡಿಕೆ ಹೆಚ್ಚಾಗಿದ್ದು, ರೈತರಿಗೆ ಕನಿಷ್ಠ ಐದು ಗಂಟೆ ನಿರಂತರ ವಿದ್ಯುತ್ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಇರುವ ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಬ್ಯಾಚ್ ಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸೂಚನೆ ನೀಡಿದರು.ಲಭ್ಯವಿರುವ ವಿದ್ಯುತ್ತಿನ ದಕ್ಷ ಹಂಚಿಕೆಯೂ ಅತಿ ಮುಖ್ಯವಾಗಿದ್ದು, ಎಸ್ಕಾಂಗಳ ಎಂ.ಡಿ.ಗಳು ಈ ಕುರಿತು ಹೆಚ್ಚಿನ ನಿಗಾ ವಹಿಸಿ ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಎಲ್ಲ ಮುಖ್ಯ ಎಂಜಿನಿಯರುಗಳನ್ನು ಜಿಲ್ಲೆಗೊಬ್ಬರಂತೆ ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಲಾಗಿದ್ದು, ಅವರು ನಿರಂತರ 5 ಗಂಟೆ ವಿದ್ಯುತ್ ಪೂರೈಕೆ ಯಾವುದೇ ಅಡಚಣೆಯಿಲ್ಲದೆ ಆಗುವಂತೆ ಖಾತರಿಪಡಿಸಬೇಕು ಎಂದು ಸೂಚಿಸಲಾಗಿದೆ.
ಮಳೆ ಕೊರತೆ ಆಗಿ, ಬರಗಾಲ ಬಂದಿದೆ. ಇದನ್ನು ರೈತರಿಗೆ ಮನವರಿಕೆ ಮಾಡಿಸಬೇಕು. ರೈತರಿಗೆ ಯಾವ ವೇಳೆ ಎಷ್ಟು ವಿದ್ಯುತ್ ಅಗತ್ಯವಿದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಂಡು ಇರುವ ವಿದ್ಯುತ್ ಅನ್ನೇ ಅವರಿಗೆ ಅಗತ್ಯ ವೇಳೆಯಲ್ಲಿ ಸರಬರಾಜು ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ವಿದ್ಯುತ್ ಉತ್ಪಾದನೆ, ಪ್ರಸರಣೆ ಮತ್ತು ವಿತರಣೆಗೆ ಸಂಬಂಧಿಸಿದ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.