ನವದೆಹಲಿ: ‘ಆಪರೇಷನ್ ಸಿಂಧೂರ’ ಬಳಿಕ ಭಯೋತ್ಪಾದನೆ ಕುರಿತು ಭಾರತದ ನಿಲುವು ಸ್ಪಷ್ಟಪಡಿಸಲು ವಿವಿಧ ದೇಶಗಳಿಗೆ ಪ್ರವಾಸ ತೆರಳಿದ್ದ ಸರ್ವಪಕ್ಷ ನಿಯೋಗಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ಮಾಡಿದರು.ಪ್ರವಾಸ ಕೈಗೊಂಡಿದ್ದ ಸಂಸದರು ಈ ವೇಳೆ ಪ್ರಧಾನಿ ಅವರ ಜೊತೆಗೆ ಅನುಭವ ಹಂಚಿಕೊಂಡರು. ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿ ವಿವಿಧ
ಪಕ್ಷಗಳಿಗೆ ಸೇರಿದ ಸುಮಾರು 50 ಮಂದಿ ಹಾಲಿ ಸಂಸದರು ಪ್ರವಾಸ ಕೈಗೊಂಡಿದ್ದರು.ಮಾಜಿ ಸಂಸದರು, ಮಾಜಿ ರಾಯಭಾರಿಗಳು ಕೂಡಾ ಈ ನಿಯೋಗದಲ್ಲಿದ್ದು, ಒಟ್ಟು 33 ದೇಶಗಳಿಗೆ ಭೇಟಿ ನೀಡಿದ್ದರು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ವಿವಿಧ ದೇಶಗಳಿಗೆ ತೆರಳಿ ಸರ್ವಪಕ್ಷ ನಿಯೋಗಗಳು ಮಂಡಿಸಿರುವ ರೀತಿಯು ಅತೀವ ಹೆಮ್ಮೆ ತಂದಿದೆ ಎಂದು ಮೋದಿ ಅವರು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನೆ ದಾಳಿಗೆ ಪ್ರತೀಕಾರವಾಗಿ ಭಾರತ ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಈ ಕುರಿತು ವಿಶ್ವದ ವಿವಿಧ ರಾಷ್ಟ್ರಗಳಿಗೆ ಭಾರತದ ನಿಲುವನ್ನು ವಿವರಿಸಲು ನಿಯೋಗ ತೆರಳಿತ್ತು.