ಮುಕ್ಕೂರು: ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿಗಳ ಸಾನಿಧ್ಯ ನೆಲೆ ಮೇಲಿನ ಮುಕ್ಕೂರು ತರವಾಡಿನಲ್ಲಿ ಅರಸು ದೈವಗಳಾದ ಶ್ರೀ ರಕ್ತೇಶ್ವರಿ, ಶ್ರೀ ಉಳ್ಳಾಕುಲು, ಶ್ರೀ ಗುಳಿಗ ದೈವ ಸಾನಿಧ್ಯಕ್ಕೆ ಸಂಬಂಧಿಸಿ ನಿರ್ಮಾಣ ಹಂತದಲ್ಲಿ ಇರುವ ಛಾವಡಿಗೆ ದಾರಂದ ಜೋಡಿಸುವ ಮುಹೂರ್ತ ಮೇ 6 ರಂದು ನಡೆಯಿತು.ಕ್ಷೇತ್ರದ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆ ಬಳಿಕ ದೈವಜ್ಞರ ಪ್ರಶ್ನಾ ಚಿಂತನೆಯ ಪ್ರಕಾರ ಉತ್ತರ ವಾಯವ್ಯ ಭಾಗದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿರುವ ದೈವದ
ಛಾವಡಿಗೆ ದಾರಂದ ಜೋಡಣೆ ಕಾರ್ಯ ನೆರವೇರಿತು. ಲಕ್ಷ್ಮೀಶ ಬೈಪಡಿತ್ತಾಯ ಮೇಲಿನ ಮುಕ್ಕೂರು ಅವರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡು ಅತೀ ಶೀಘ್ರದಲ್ಲಿ ಪ್ರತಿಷ್ಠಾ ಕಾರ್ಯ ನಡೆದ ನಂತರ ಈ ಛಾವಡಿಯ ಪೀಠದಲ್ಲಿ ರಕ್ತೇಶ್ವರಿ, ಉಳ್ಳಾಕುಲು, ಗುಳಿಗನ ಉಪಾಧಿಯನ್ನು ಇಟ್ಟು ಆರಾಧನೆ ನಡೆಯಲಿದೆ. ಪ್ರಶ್ನಾ ಚಿಂತನೆಯ ಪ್ರಕಾರ ಈ ದೈವಗಳಿಗೆ ಸ್ಥಳದಲ್ಲಿ ಒಂದು ಬಾರಿ ಉತ್ಸವ, ಪ್ರತಿ ವರ್ಷ ಪಂಚ ಪರ್ವ ಮತ್ತು ನಿತ್ಯ ದೀಪ, 12 ಸಂಕ್ರಮಣಗಳಲ್ಲಿ ಬರುವ ಹಬ್ಬ ದೀಪಾವಳಿ, ಯುಗಾದಿ, ಪತ್ತನಾಜೆ, ಚೌತಿ, ವಿಶೇಷವಾಗಿ ನವರಾತ್ರಿಯಲ್ಲಿ ಒಂದು ದಿನದ ಪರ್ವಗಳನ್ನು ಆಚರಣೆ ನಡೆಯಲಿದೆ. ಈಗಾಗಲೇ ಛಾವಡಿ ನಿರ್ಮಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ಈ ಸಂದರ್ಭದಲ್ಲಿ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಕುಂಬ್ರ ದಯಾಕರ ಆಳ್ವ, ತರವಾಡು ಮನೆಯ ವಸಂತ ಬೈಪಡಿತ್ತಾಯ, ಲಕ್ಷ್ಮೀಶ ಬೈಪಡಿತ್ತಾಯ, ಗುಡ್ಡಪ್ಪ ಗೌಡ ಅಡ್ಯತಕಂಡ, ಜಯಂತ ಗೌಡ ಕುಂಡಡ್ಕ, ಲಿಂಗಪ್ಪ ಗೌಡ ಕುಂಡಡ್ಕ, ಸಾವಿತ್ರಿ ಚಾಮುಂಡಿಮೂಲೆ, ಶಿವಮ್ಮ ತುಂಡುಕಾಡು, ಭಾಸ್ಕರ ಕುಂಡಡ್ಕ, ರವಿ ಕುಂಡಡ್ಕ, ಗಗನ್ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು.
2024 ಫೆಬ್ರವರಿ 26 ರಿಂದ 29 ರ ತನಕ ದೈವಜ್ಞ ಗಣೇಶ್ ಭಟ್ ಮುಳಿಯ ಅವರ ನೇತೃತ್ವದಲ್ಲಿ ನಡೆದ ಅಷ್ಠಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಪ್ರಕಾರ ವಿವಿಧ ದೇವಾಲಯಗಳಿಗೆ ತೆರಳಿ ಸೇವೆ ಸರ್ಮಪಿಸಲು ನಿರ್ಧರಿಸಲಾಗಿದ್ದು ಸೀಮೆ ಕ್ಷೇತ್ರ ಪಂಜ, ಪೆರುವಾಜೆ, ನಳೀಲು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಸೇವೆ ಸಲ್ಲಿಸಿ ಬಳಿಕ ಜೀರ್ಣೋದ್ಧಾರ ಕಾರ್ಯಕ್ಕೆ ಸಂಬಂಧಿಸಿದಂತೆ ಮುಂದಿನ ಹಂತದ ಧಾರ್ಮಿಕ ಕಾರ್ಯ ನಡೆಸಲಾಗುವುದು ಎಂದು ಮೇಲಿನ ತರವಾಡು ಮನೆಯ ಲಕ್ಷ್ಮೀಶ ಬೈಪಡಿತ್ತಾಯ ತಿಳಿಸಿದ್ದಾರೆ.











