ಸುಳ್ಯ: ಸುಮಾರು 42 ವರ್ಷಗಳ ಹಿಂದೆ ಆರಂಭಗೊಂಡು ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಜ್ಯೋತಿ ಪ್ರೌಢಶಾಲೆಯ ಆಡಳಿತ ನಿರ್ವಹಣೆಯನ್ನು ಬೆಂಗಳೂರಿನ ಪ್ರಣವ ಫೌಂಡೇಷನ್ ವಹಿಸಿಕೊಂಡಿದೆ ಎಂದು ಜ್ಯೋತಿ ವಿದ್ಯಾ ಸಂಘದ ಮಾಜಿ ಅಧ್ಯಕ್ಷ ಡಾ.ಎನ್.ಎ.ಜ್ಞಾನೇಶ್ ಹಾಗೂ ಜ್ಯೋತಿ ಪ್ರೌಢ ಶಾಲೆಯ ನೂತನ ಅಧ್ಯಕ್ಷ, ಪ್ರಣವ ಫೌಂಡೇಶನ್ನ ರಾಕೆಶ್ ರೈ ಕೆ.ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿವರ ತಿಳಿಸಿದರು.ಡಾ.ಜ್ಞಾನೇಶ್ ಮಾತನಾಡಿ ಅನುದಾನಿತ ಶಾಲೆಗಳಲ್ಲಿ ನಿವೃತ್ತರಾದ ಶಿಕ್ಷಕರ ಬದಲಿಗೆ ಸರಕಾರದಿಂದ ಹೊಸ ನೇಮಕಾತಿ ಇಲ್ಲದ
ಕಾರಣ ಶಿಕ್ಷಕರ ನೇಮಕ ಮತ್ತಿತರ ನಿರ್ವಹಣೆ ಕಷ್ಟವಾಗುತ್ತಿರುವ ಕಾರಣ ಶಾಲೆಯ ಆಡಳಿತ ನಿರ್ವಹಣೆಯ ಜವಾಬ್ದಾರಿಯನ್ನು ಪ್ರಣವ ಫೌಂಡೇಶನ್ಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು. ಡಿಸೆಂಬರ್ 24, 2024 ರಿಂದ ಶಾಲೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡು ಮುನ್ನಡೆಸಲಾಗುತ್ತಿದೆ. ಇದೇ ಸಮಯದಲ್ಲಿ ಹೊಸ ಆಡಳಿತ ಮಂಡಳಿಯನ್ನು ರಚಿಸಲಾಗಿದೆ.ಇದಕ್ಕಾಗಿ ಪ್ರಣವ್ ಫೌಂಡೇಶನ್, ಜ್ಯೋತಿ ವಿದ್ಯಾ ಸಂಘದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದರು.

ನೂತನ ಅಧ್ಯಕ್ಷ ರಾಕೇಶ್ ರೈ ಮಾತನಾಡಿ ಆಧುನಿಕ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದು,ಆಧುನಿಕ ಜಗತ್ತಿನ ಸವಾಲುಗಳಿಗೆ ತಕ್ಕಂತೆ ಗ್ರಾಮೀಣ ಮಕ್ಕಳನ್ನು ಅಣಿಗೊಳಿಸುವುದು ಹಾಗೂ ಸೂಕ್ತ ಅವಕಾಶಗಳನ್ನು ನೀಡಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು ಪುಣವ್ ಫೌಂಡೇಶನ್ನ ಗುರಿ.ಗ್ರಾಮಸ್ಥರೇ ಸೇರಿ ಕಟ್ಟಿದ ಈ ಶಾಲೆಯನ್ನು ಈವರೆಗೆ ಗ್ರಾಮಸ್ಮರೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಸಾವಿರಾರು ಮಕ್ಕಳಿಗೆ ಭವಿಷ್ಯ ಕಲ್ಪಿಸಿದ್ದಾರೆ. ಮುಂದಿನ ವರ್ಷದಿಂದ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುತ್ತದೆ.ಅದಕ್ಕೆ ಪೂರಕವಾಗಿ ಆಧುನಿಕ ತಂತ್ರಜ್ಞಾನಗಳನ್ನು ಸದ್ಬಳಕೆ ಮಾಡಲಾಗುತ್ತಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ವಿಕಸನಕ್ಕೆ ಸಹಕಾರಿಯಾಗುವ ಸಮಗ್ರ ಶಿಕ್ಷಣ ಪದ್ಧತಿಯನ್ನು ಶಾಲೆಯಲ್ಲಿ ತರಲಾಗುತ್ತಿದೆ. ಮಕ್ಕಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಆದ್ಯತೆ ಹಾಗೂ ಪ್ರೋತ್ಸಾಹ ನೀಡಲಾಗುವುದು.
ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಮತ್ತು ಇತರೆ ವಿದ್ಯಾರ್ಥಿ ವೇತನ ನೀಡಲಾಗುವುದು. ಈಗ 2025-26 ನೇ ಸಾಲಿನಲ್ಲಿ ದಾಖಲಾತಿಗೆ ಆಹ್ವಾನಿಸಲಾಗಿದೆ. ಶಾಲೆಯಲ್ಲಿ 8, 9 ಹಾಗೂ 10 ನೇ ತರಗತಿಗಳಿವೆ. ಒಬ್ಬ ಮುಖ್ಯೋಪಾಧ್ಯಾಯರು, 6 ಶಿಕ್ಷಕರು, ಇಬ್ಬರು ಬೋಧಕೇತರ ಸಿಬ್ಬಂದಿ ಇದ್ದಾರೆ. ಪೆರಾಜೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳಬಹುದು ಎಂದರು.

ಸೌಲಭ್ಯಗಳು:
ಮೊದಲ ಹಂತದಲ್ಲಿ ಹಲವು ಸೌಕರ್ಯಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಮುಂದೆ ಹಂತಹಂತವಾಗಿ ಸೌಲಭ್ಯಗಳನ್ನು ತರಲಾಗುವುದು. ಉಚಿತ ಸಮವಸ್ತ್ರ, ಉಚಿತ ಕಲಿಕಾ ಸಾಮಗ್ರಿ, ಉಚಿತ ಶೈಕ್ಷಣಿಕ ಪ್ರವಾಸ, ಶಾಲಾ ವಾಹನದ ವ್ಯವಸ್ಥೆ, ಕಂಪ್ಯೂಟರ್- ಡಿಜಿಟಲ್ ಶಿಕ್ಷಣ, ಶುದ್ಧ ಕುಡಿಯುವ ನೀರಿನ ಘಟಕ, ಡಿಜಿಟಲ್ ಗ್ರಂಥಾಲಯ, ಬಿಸಿ ಊಟ, ಪೌಷ್ಠಿಕ ಆಹಾರ, ಆಧುನಿಕ ವಿಜ್ಞಾನ ಪ್ರಯೋಗಾಲಯ, ಇಂಗ್ಲೀಷ್ ಸ್ಪೀಕಿಂಗ್ ತರಗತಿ, ಜೀವನ ಕೌಶಲ್ಯ ತರಬೇತಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ, ಬಾಲಕರಿಗೆ ಸರ್ಕಾರದ ವಸತಿ ನಿಲಯ ವ್ಯವಸ್ಥೆ ಇದೆ. ವಿಶನ್ 2030ರ ಅನ್ವಯ ವಾರ್ಷಿಕ 1,200 ವಿದ್ಯಾರ್ಥಿಗಳ ಸಾಮರ್ಥ್ಯದ ಕಲಿಕಾ ಕೇಂದ್ರವನ್ನಾಗಿ ಬೆಳೆಸುವ ಗುರಿ ಇದೆ,
600 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣ ಮಾಡುವ ಮತ್ತು ಆಲ್ ಟೆಕ್ ಪಾರ್ಕ್ ಮತ್ತು ರಿಸರ್ಚ್ ಸೆಂಟರ್ ಮಾಡುವ ಉದ್ದೇಶ ಇದೆ ಎಂದು ವಿವರಿಸಿದರು.
ಶಾಲೆಯ ಇತಿಹಾಸ:
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ 1973 ರಲ್ಲಿ ಪೆರಾಜೆಯಲ್ಲಿ ಜ್ಯೋತಿ ವಿದ್ಯಾ ಸಂಘ ಸ್ಥಾಪನೆಯಾಯಿತು. 1983 ರಲ್ಲಿ ಜ್ಯೋತಿ ಕನ್ನಡ ಮಾಧ್ಯಮ ಪ್ರೌಢಶಾಲೆ ಆರಂಭವಾಯಿತು. ಈವರೆಗೆ 5,400 ಮಕ್ಕಳು ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. 2.75 ಎಕರೆಯ ವಿಶಾಲ ಪ್ರದೇಶದಲ್ಲಿ ಶಾಲಾ ಕಟ್ಟಡವಿದೆ. ಇದೇ ಜಾಗದಲ್ಲಿ ಮಕ್ಕಳಿಗೆ ಆಟವಾಡುವ ಮೈದಾನವಿದೆ.ಸುಳ್ಯ ನಿವಾಸಿ, ಶಕುಂತಲಾ ಯು. ರೈ ಅವರು ನಾಲ್ಕು ದಶಕಗಳ ಹಿಂದೆ ಶಾಲೆ ನಿರ್ಮಾಣವಾಗಿ ಉಚಿತವಾಗಿ ಭೂಮಿ ನೀಡಿದ್ದರು ಎಂದು ಡಾ.ಜ್ಞಾನೇಶ್ ತಿಳಿಸಿದ್ದಾರೆ.
ನೂತನ ಆಡಳಿತ ಮಂಡಳಿ:
ಶಾಲೆಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಕೇಶ್ ರೈ ಕೆ, ಕಾರ್ಯದರ್ಶಿಯಾಗಿ ನಾಗರಾಜ್ ಬಿ.ಹೆಬ್ಬಾಳ್, ಉಪಾಧ್ಯಕ್ಷರಾಗಿ ರಕ್ಷಿತ್ ಕೆ.ಪಿ, ಖಜಾಂಜಿಯಾಗಿ ಮಂಜುನಾಥ್ ಯು.ಎಚ್, ಸಂಚಾಲಕರಾಗಿ
ಮಹೇಶ್ ಕುಮಾರ್ ಮೇನಾಲ ಕಾರ್ಯನಿರ್ವಹಿಸುತ್ತಿದ್ದಾರೆ.
ನಿರ್ದೇಶಕರಾಗಿ ಶಕುಂತಲಾ ಯು ರೈ,ಡಾ.ಎನ್.ಎ.ಜ್ಞಾನೇಶ್, ಎನ್.ಎ.ರಾಮಚಂದ್ರ, ನೇತ್ರಾವತಿ ಎನ್, ಅರ್ಚನ ಜೋಶಿ, ಗುರುರಂಜನ್ ಪಿ, ವಿಷ್ಣು ಪಿ. ಕಟ್ಟಿ,ರವೀಂದ್ರ ದೇಸಾಯಿ
ಹರಿಶ್ಚಂದ್ರ ಮುಡುಕಜೆ,ಕೆ.ಕೆ.ಪದ್ಮಯ್ಯ,ಡಿ.ಪಿ.ಪೂವಪ್ಪ ಹಾಗೂ
ಜಿ.ಆರ್.ನಾಗರಾಜ್ ನಿರ್ದೇಶಕರು (ಪದನಿಮಿತ್ತ)
ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಸಂಚಾಲಕ ಮಹೇಶ್ ಕುಮಾರ್ ಮೇನಾಲ, ಶಾಲಾ ಮುಖ್ಯೋಪಾಧ್ಯಾಯ ನಾಗರಾಜ್, ಉಪಾಧ್ಯಕ್ಷ ರಕ್ಷಿತ್ ಕೆ.ಪಿ, ಖಜಾಂಜಿ ಮಂಜುನಾಥ್.ಯು.ಎಚ್, ನಿರ್ದೇಶಕ ಗುರುರಂಜನ್ ಪುಣಿಂಚಿತ್ತಾಯ ಉಪಸ್ಥಿತರಿದ್ದರು.