ಲಖನೌ:ನಾಯಕ ಶ್ರೇಯಸ್ ಅಯ್ಯರ್ ಶತಕ ಮತ್ತು ಪ್ರಭಸಿಮ್ರನ್ ಸಿಂಗ್ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸುಲಭ ಜಯ ದಾಖಲಿಸಿತು.ಲಖನೌ ನೀಡಿದ್ದ 197 ರನ್ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ 12 ಎಸೆತಗಳು ಬಾಕಿ ಇರುವಂತೆಯೇ
7 ವಿಕೆಟ್ಗಳ ಜಯ ಸಾಧಿಸಿದ್ದು, 15 ಅಂಕಗಳೊಂದಿಗೆ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವ ಪಂಜಾಬ್ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಭಾನುವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಪಂಜಾಬ್ ಭವಿಷ್ಯವನ್ನು ನಿರ್ಧಾರ ಮಾಡಲಿದೆ. ರಾಜಸ್ಥಾನ ಗೆದ್ದರೆ 16 ಅಂಕಗಳೊಂದಿಗೆ ಪ್ಲೇಆಫ್ಗೇರಲಿದೆ. ಮುಂಬೈ ಗೆದ್ದರೆ ಪಂಜಾಬ್ಗೆ ಅವಕಾಶ ಒಲಿದು ಬರುವ ನಿರೀಕ್ಷೆ ಇದೆ.
ಪಂಜಾಬ್ ಆರಂಭದಲ್ಲಿಯೇ ಪ್ರಿಯಾಂಶ್ ಆರ್ಯ (0) ಮತ್ತು ಕೂಪರ್ ಕೊನೊಲಿ (18) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ವಿಕೆಟ್ಗೆ ಪ್ರಭಸಿಮ್ರನ್ ಸಿಂಗ್ ಜತೆಯಾದ ನಾಯಕ ಶ್ರೇಯಸ್ ಅಯ್ಯರ್ ಜೋಡಿ 140 ರನ್ಗಳ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯಿತು.ಪ್ರಭಸಿಮ್ರನ್ ಸಿಂಗ್ 39 ಎಸೆತದಲ್ಲಿ 7 ಬೌಂಡರಿ, 2 ಸಿಕ್ಸರ್ನಿಂದ 69 ರನ್ಗಳಿಸಿದರೆ, ಶ್ರೇಯಸ್ ಅಯ್ಯರ್ ಕೇವಲ 51 ಎಸೆತದಲ್ಲಿ 11 ಬೌಂಡರಿ, 5 ಸಿಕ್ಸರ್ನಿಂದ ಅಜೇಯ 101 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಲಖನೌ ತಂಡಕ್ಕೆ ಅರ್ಶಿನ್ ಕುಲಕರ್ಣಿ (0) ಮತ್ತು ನಿಕೋಲಸ್ ಪೂರನ್ (2) ವಿಕೆಟ್ ಉರುಳಿಸುವ ಮೂಲಕ ಆರಂಭದಲ್ಲಿಯೇ ಪಂಜಾಬ್ ಆಘಾತವನ್ನು ನೀಡಿತು. ಬಳಿಕ ಆಯುಷ್ ಬದೋನಿ ಕೇವಲ 18 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್ನಿಂದ 43 ರನ್ಗಳಿಸಿದರೆ, ನಾಯಕ ರಿಷಭ್ ಪಂತ್ 26 ರನ್ ಗಳಿಸಿದರೆ ಜೋಶ್ ಇಂಗ್ಲಿಸ್ 44 ಎಸೆತದಲ್ಲಿ 9 ಬೌಂಡರಿ 2 ಸಿಕ್ಸರ್ನಿಂದ 72 ರನ್,ಅಬ್ದುಲ್ ಸಮದ್ ಅಜೇಯ 37 ರನ್ಗಳ ಕೊಡುಗೆ ನೀಡಿದರು.ಪಂಜಾಬ್ ಕಿಂಗ್ಸ್ ಪರ ಯುಜುವೇಂದ್ರ ಚಾಹಲ್ 25ಕ್ಕೆ 2, ಮಾರ್ಕೊ ಜಾನ್ಸೆನ್ 29ಕ್ಕೆ 2 ಮತ್ತು ಅಜ್ಮತುಲ್ಲಾ ಒಮರ್ಜೈ, ಶಶಾಂಕ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.














