ಸುಳ್ಯ:ಕಾಣಿಯೂರು-ಸುಳ್ಯ- ನಾಪೋಕ್ಲು ಮಾರ್ಗವಾಗಿ ಮೈಸೂರಿಗೆ ನೂತನ ರೈಲು ಮಾರ್ಗ ನಿರ್ಮಾಣ ಮಾಡಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು. ಇಂದು ಮಂಗಳೂರಿಗೆ ಆಗಮಿಸಿದ ಸಚಿವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದರು. ರಾಜ್ಯದ
ಗ್ರಾಮೀಣ ಭಾಗಗಳಿಗೆ ಉತ್ತಮ ಸಾರಿಗೆ ಸಂಪರ್ಕ ದೃಷ್ಟಿಯಿಂದ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮಹತ್ವದ್ದಾಗಿರುವ, ಈ ರೈಲು ಮಾರ್ಗವು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದೆ.ನೂತನ ರೈಲು ಮಾರ್ಗ ಮಂಗಳೂರು-ಹಾಸನ ರೈಲು ಮಾರ್ಗದಲ್ಲಿರುವ ‘ಕಾಣಿಯೂರು’ ನಿಲ್ದಾಣದಿಂದ ಸುಳ್ಯ ಮತ್ತು ನಾಪೋಕ್ಲು ಮೂಲಕ ಹಾದುಹೋಗಿ, ಪ್ರಸ್ತಾಪಿತ ಕುಶಾಲನಗರ- ಮೈಸೂರು ರೈಲು ಮಾರ್ಗವನ್ನು ಕುಶಾಲನಗರದಲ್ಲಿ ಸಂಪರ್ಕಿಸಲಿದೆ. ತನ್ಮೂಲಕ ಮೈಸೂರು ಮತ್ತು ಮುಂದಿನ ಊರುಗಳಿಗೆ ನೇರ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಆಗಿದ್ದರೂ, ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಯಾವುದೇ ರೈಲು ಹಳಿ ಅಥವಾ ರೈಲು ನಿಲ್ದಾಣವಿಲ್ಲ. ಈ ಪ್ರಸ್ತಾಪಿತ ಯೋಜನೆಯು ಸಂಪೂರ್ಣವಾಗಿ ಸಂಪರ್ಕವಂಚಿತವಾಗಿರುವ ಈ ಪ್ರದೇಶಗಳಿಗೆ ರೈಲು ಸೌಲಭ್ಯ ಒದಗಿಸುವ ಮೂಲಕ ಬಹುಕಾಲದ ಕೊರತೆಯನ್ನು ನೀಗಿಸಲಿದೆ. ಧಾರ್ಮಿಕವಾಗಿ ಈ ಪ್ರದೇಶವು ಅತ್ಯಂತ ಮಹತ್ವದ್ದಾಗಿದ್ದು, ವಿಶ್ವಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿದೆ. ಇಲ್ಲಿಗೆ ದೇಶಾದ್ಯಂತ ಲಕ್ಷಾಂತರ ಭಕ್ತರು ಪ್ರತಿವರ್ಷ ಆಗಮಿಸುತ್ತಾರೆ. ರೈಲು ಸಂಪರ್ಕದ ಕೊರತೆಯಿಂದಾಗಿ ಯಾತ್ರಿಕರು ರಸ್ತೆ ಮಾರ್ಗವನ್ನೇ ಅವಲಂಬಿಸಬೇಕಾಗಿದೆ, ಇದು ಸಂಚಾರ ದಟ್ಟಣೆ ಮತ್ತು ತೊಂದರೆಗೆ ಕಾರಣವಾಗಿದೆ. ಸುಳ್ಯದ ಮೂಲಕ ಹಾದುಹೋಗುವ ರೈಲು ಮಾರ್ಗವು ಈ ಪ್ರಮುಖ ಯಾತ್ರಾಸ್ಥಳಕ್ಕೆ ಉತ್ತಮ ಸಂಪರ್ಕ ಕಲ್ಪಿಸಲಿದೆ.
ಆರ್ಥಿಕ ದೃಷ್ಟಿಕೋನದಿಂದ ನೋಡಿದರೆ, ಈ ನೂತನ ಮಾರ್ಗವು ಈ ಭಾಗದ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ. ಸುಳ್ಯ ಮತ್ತು ಕೊಡಗು ಭಾಗದಲ್ಲಿ ಕಾಫಿ, ಸಾಂಬಾರ ಪದಾರ್ಥಗಳು, ಅಡಿಕೆ, ಕಾಳುಮೆಣಸು ಮತ್ತು ರಬ್ಬರ್ ಬೆಳೆಯಲಾಗುತ್ತದೆ. ಇವು ದೇಶೀಯ ವ್ಯಾಪಾರ ಮತ್ತು ರಫ್ತಿಗೆ ದೊಡ್ಡ ಕೊಡುಗೆ ನೀಡುತ್ತವೆ. ರೈಲು ಸಂಪರ್ಕವು ಈ ಸರಕುಗಳನ್ನು ಮಾರುಕಟ್ಟೆಗಳು, ಬಂದರುಗಳು ಮತ್ತು ಸಂಸ್ಕರಣಾ ಕೇಂದ್ರಗಳಿಗೆ ತ್ವರಿತವಾಗಿ ಮತ್ತು ಮಿತವ್ಯಯದಲ್ಲಿ ಸಾಗಿಸಲು ಸೌಕರ್ಯವಾಗಲಿದೆ.
ಈ ಹೊಸ ಮಾರ್ಗವು ಕರಾವಳಿ ಕರ್ನಾಟಕ ಮತ್ತು ಒಳನಾಡು ಪ್ರದೇಶಗಳನ್ನು ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಭಾರತದೊಂದಿಗೆ ಸಂಪರ್ಕಿಸಲು ನೇರ ರೈಲುಗಳನ್ನು ಓಡಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಕಾಣಿಯೂರು-ಸುಳ್ಯ-ನಾಪೋಕ್ಲು-ಕುಶಾಲನಗರ-ಮೈಸೂರು ರೈಲು ಮಾರ್ಗದ ಸರ್ವೇ ನಡೆಸಲು ರೈಲ್ವೇ ಮಂಡಳಿ ಮತ್ತು ಸಂಬಂಧಿತ ವಿಭಾಗಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮತ್ತು ಮುಂಬರುವ ರೈಲ್ವೇ ಮೂಲಸೌಕರ್ಯ ಯೋಜನೆಗಳು ಹಾಗೂ ಬಜೆಟ್ ಅವಕಾಶಗಳಲ್ಲಿ ಈ ನೂತನ ಮಾರ್ಗದ ನಿರ್ಮಾಣದ ಪ್ರಸ್ತಾವನೆಯನ್ನು ಸೇರಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ಈ ಹಿನ್ನಲೆಯಲ್ಲಿ ದ.ಕ ಸಂಸದರು, ಕೊಡಗು ಸಂಸದರು ಮತ್ತು ರೈಲ್ವೇ ಇಲಾಖೆಯ ತಾಂತ್ರಿಕ ತಂಡದವರೊಂದಿಗೆ ರೈಲ್ವೇ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವನೆಯ ಕುರಿತು ಚರ್ಚಿಸಲು ಸಭೆಯನ್ನು ಆಯೋಜಿಸಬೇಕು ಎಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ
ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ರಾಜೇಶ್ ನಾಯ್ಕ ಉಳಿಪಾಡಿಗುತ್ತು, ಡಾ.ಭರತ್ ಶೆಟ್ಟಿ ಉಪಸ್ಥಿತರಿದ್ದರು.














