ಹೈದರಾಬಾದ್: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಆವೃತ್ತಿಯ ತಮ್ಮ ಕೊನೆಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತಿದೆ.
ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಅಂದಿನ ಪಂದ್ಯದಲ್ಲಿ
ಆರ್ಸಿಬಿ ಗೆಲ್ಲುವ ಮೂಲಕ ಶುಭಾರಂಭ ಮಾಡಿತ್ತು. ಸದ್ಯ, ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವ ಆರ್ಸಿಬಿ ತಂಡವು ಕಡಿಮೆ ಅಂತರದಲ್ಲಿ ಸೋತರೂ ಟಾಪ್–2ರಲ್ಲಿಯೇ ಲೀಗ್ ಅನ್ನು ಮುಕ್ತಾಯಗೊಳಿಸಲಿದೆ. ಒಂದುವೇಳೆ ಈ ಪಂದ್ಯವನ್ನು ದೊಡ್ಡ ಅಂತರದಲ್ಲಿ ಸೋತರೆ, ಎಸ್ಆರ್ಎಚ್ ಗುಜರಾತ್ ಅನ್ನು ಹಿಂದಿಕ್ಕಿ ಅಗ್ರ ಎರಡರೊಳಗೆ ಲೀಗ್ ಮುಗಿಸುವ ಅವಕಾಶ ಇದೆ.
ಈ ಪಂದ್ಯವನ್ನು ಆರ್ಸಿಬಿ ಗೆದ್ದರೆ, ಅಗ್ರಸ್ಥಾನ ಅಬಾಧಿತವಾಗಿರಲಿದೆ. ಒಂದುವೇಳೆ ಸೋತರೆ, ರನ್ರೇಟ್ ಎಸ್ಆರ್ಎಚ್ ತಂಡದ ಅಗ್ರ–2 ಸ್ಥಾನಗಳನ್ನು ನಿರ್ಧರಿಸಲಿದೆ.ಆರ್ಸಿಬಿ ತಂಡವು ಆಡಿರುವ 13 ಪಂದ್ಯಗಳಲ್ಲಿ 9 ಗೆಲುವು ಹಾಗೂ 4 ಸೋಲುಗಳೊಂದಿಗೆ 18 ಅಂಕಗಳ ಸಹಿತ ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ, ಇಷ್ಟೇ ಪಂದ್ಯಗಳನ್ನು ಆಡಿರುವ ಎಸ್ಆರ್ಎಚ್ 8 ಗೆಲುವು 5 ಸೋಲುಗಳೊಂದಿಗೆ 16 ಅಂಕ ಗಳಿಸಿದೆ. ಅದರೊಂದಿಗೆ ಮೂರನೇ ಸ್ಥಾನದಲ್ಲಿದೆ. ಪಂದ್ಯದಲ್ಲಿ ಎಸ್ಆರ್ಎಚ್ ಮೊದಲು ಬ್ಯಾಟ್ ಮಾಡುತಿದೆ.













