ಪ್ಯಾರೀಸ್: ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ನಲ್ಲಿ ತೆರೆಬಿದ್ದಿದೆ. ಪ್ಯಾರಿಸ್ನ ಸ್ಟೇಡ್ ಡೆ ಫ್ರಾನ್ಸ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದ ನಂತರ, 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಲಾಸ್ ಏಜಂಲೀಸ್ಗೆ ಆಯೋಜನೆಯ ಹಕ್ಕನ್ನು ಹಸ್ತಾಂತರಿಸಲಾಯಿತು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 9000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಪ್ಯಾರಿಸ್ ಕ್ರೀಡಾಕೂಟದಲ್ಲಿ
ನಾಲ್ಕು ಚಿನ್ನ ಮತ್ತು ಕಂಚು ಗೆದ್ದ ಫ್ರೆಂಚ್ ಈಜು ಸೆನ್ಸೇಷನ್ ಲಿಯಾನ್ ಮಾರ್ಚಂಡ್, ಕೌಲ್ಡ್ರನ್ ಅನ್ನು ನಂದಿಸಿ ಮತ್ತು ಒಲಿಂಪಿಕ್ ಜ್ವಾಲೆಯೊಂದಿಗೆ ಲ್ಯಾಂಟರ್ನ್ ಅನ್ನು ಕ್ರೀಡಾಂಗಣಕ್ಕೆ ಒಯ್ಯುವುದರೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಫ್ರೆಂಚ್ ರಗ್ಬಿ ತಾರೆ ಆಂಟೊಯಿನ್ ಡುಪಾಂಟ್ ನೇತೃತ್ವದ 205 ದೇಶಗಳ ಪ್ರತಿ ಧ್ವಜಧಾರಿಗಳು ಪರೇಡ್ ಆಫ್ ದಿ ನೇಷನ್ನಲ್ಲಿ ಭಾಗವಹಿಸಿದ್ದರು.ಪ್ಯಾರಿಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಶೂಟರ್ ಮನು ಭಾಕರ್ ಹಾಗೂ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಕಾಣಿಸಿಕೊಂಡಿದ್ದರು.
ಮನು ಭಾಕರ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಕಂಚು ಗೆದ್ದ ನಂತರ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಅವರೊಂದಿಗೆ ಮೂರನೇ ಸ್ಥಾನ ಗಳಿಸಿ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ಸೃಷ್ಟಿಸಿದರು. ಮತ್ತೊಂದೆಡೆ, ಪುರುಷರ ಹಾಕಿಯಲ್ಲಿ ಭಾರತ ಕಂಚಿನ ಪದಕವನ್ನು ಉಳಿಸಿಕೊಳ್ಳುವಲ್ಲಿ ಶ್ರೀಜೇಶ್ ಮಹತ್ವದ ಪಾತ್ರ ವಹಿಸಿದರು. ಹೀಗಾಗಿಯೇ ಇವರಿಬ್ಬರನ್ನು ಧ್ವಜಧಾರಿಗಳಾಗಿ ಆಯ್ಕೆ ಮಾಡಲಾಗಿತ್ತು.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು 6 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಪದಕ ಪಟ್ಟಿಯಲ್ಲಿ 71ನೇ ಸ್ಥಾನ ಪಡೆದುಕೊಂಡಿದೆ. 40 ಚಿನ್ನ ಸೇರಿ 126 ಪದಕ ಪಡೆದ ಅಮೇರಿಕ ಪದಕ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದರೆ 40 ಚಿನ್ನ ಸೇರಿ 91 ಪದಕ ಪಡೆದ ಚೀನಾ ಎರಡನೇ ಸ್ಥಾನ ಪಡೆದುಕೊಂಡಿತು.