ಪ್ಯಾರಿಸ್: ಭಾರತದ ಪ್ರವೀಣ್ ಕುಮಾರ್ ಅವರು ಪ್ಯಾರಾಲಿಂಪಿಕ್ಸ್ ಪುರುಷರ ಟಿ64 ಹೈಜಂಪ್ನಲ್ಲಿ ಅಮೋಘ ಪ್ರದರ್ಶನ ನೀಡಿ ದಾಖಲೆಯೊಡನೆ ಚಿನ್ನ ಗೆದ್ದರು. ಪ್ರವೀಣ್, ಆರು ಮಂದಿಯಿದ್ದ ಫೈನಲ್ ಕಣದಲ್ಲಿ 2.08 ಮೀಟರ್ ಜಿಗಿದು ಅಗ್ರಸ್ಥಾನಕ್ಕೇರಿದರು.
ಅಮೆರಿಕದ
ಡೆರೆಕ್ ಲೊಸಿಡೆಂಟ್ ಅವರು 2.06 ಮೀಟರ್ ಜಿಗಿದು ಬೆಳ್ಳಿ ಗೆದ್ದರು. ಉಜ್ಬೇಕಿಸ್ತಾನದ ಟೆಮುರ್ಬೆಕ್ ಗಿಯಾಝೋವ್ ಅವರು 2.03 ಮೀ.ನೊಡನೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಇದರೊಂದಿಗೆ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಪ್ರದರ್ಶನ ನೀಡಿರುವ ಭಾರತೀಯ ಸ್ಪರ್ಧಿಗಳು ಈವರೆಗೆ ಒಟ್ಟು 26 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು 11 ಕಂಚಿನ ಪದಕಗಳನ್ನು ಒಳಗೊಂಡಿದ್ದು, 14ನೇ ಸ್ಥಾನ ಕಾಯ್ದುಕೊಂಡಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಐದು ಚಿನ್ನ ಸೇರಿದಂತೆ ಭಾರತ ಒಟ್ಟು 19 ಪದಕಗಳನ್ನು ಗೆದ್ದಿತ್ತು.