ಟ್ರಿನಿಡಾಡ್: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ಅವರು ತನ್ನ 29ನೇ ವರ್ಷಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.‘ನನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಬದುಕು ಮುಕ್ತಾಯವಾಗಿದ್ದು, ವೆಸ್ಟ್ ಇಂಡೀಸ್ ಕ್ರಿಕೆಟ್ ಕಡೆಗಿನ ನನ್ನ ಪ್ರೀತಿ ಯಾವತ್ತೂ ಕಡಿಮೆಯಾಗುವುದಿಲ್ಲ. ಮುಂದಿನ ದಿನಗಳಲ್ಲೂ ತಂಡವು ಗೆಲುವಿನ ಹಾದಿಯಲ್ಲಿ ಸಾಗಲಿ..’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. 2016ರಲ್ಲಿ
ಪಾಕಿಸ್ತಾನ ವಿರುದ್ಧದ ಟಿ–20 ಅಂತರರಾಷ್ಟೀಯ ಪಂದ್ಯದ ಮೂಲಕ ಅಂತರರಾಷ್ಟೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಎಡಗೈ ಬ್ಯಾಟರ್ ಪೂರನ್, ತಮ್ಮ ಅಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. 2022ರಲ್ಲಿ ಟಿ–20 ಹಾಗೂ ಏಕದಿನ ಪಂದ್ಯಗಳ ನಾಯಕತ್ವ ಕೂಡ ವಹಿಸಿಕೊಂಡಿದ್ದರು.
ವೆಸ್ಟ್ ಇಂಡೀಸ್ ಪರವಾಗಿ 106 ಟಿ–20 ಪಂದ್ಯಗಳಲ್ಲಿ 136.40 ಸ್ಟ್ರೈಕ್ ರೇಟ್ನಲ್ಲಿ 1,668ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕ ಸೇರಿವೆ. 61 ಏಕದಿನ ಪಂದ್ಯಗಳನ್ನು ಆಡಿರುವ ಪೂರನ್, 3 ಶತಕ ಹಾಗೂ 11 ಅರ್ಧಶತಕ ಸಹಿತ 1,983 ರನ್ ಬಾರಿಸಿದ್ದಾರೆ. 29 ವರ್ಷದ ಎಡಗೈ ಆಟಗಾರ, ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆಯೇ ಮಾಡಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ(ಐಪಿಎಲ್) ಸದ್ದು ಮಾಡಿದ್ದ ಪೂರನ್ ಅವರು ರಾಯಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪರವಾಗಿ ಆಡಿದ್ದರು. ಅಂತರರಾಷ್ಟೀಯ ನಿವೃತ್ತಿಯ ನಂತರ ಫ್ರಾಂಚೈಸಿ ಕ್ರಿಕೆಟ್ ಕಡೆಗೆ ಸಂಪೂರ್ಣ ಗಮನ ಹರಿಸುವ ಸಾಧ್ಯತೆ ಇದೆ.