ನವದೆಹಲಿ:ಭಾರತ ಯಾವುದೇ ಪರಮಾಣು ಬೆದರಿಕೆಗೆ ಹೆದರುವುದಿಲ್ಲ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರವನ್ನು ಉದ್ದೇಶಿಸಿ ಮೋದಿ ಮಾತನಾಡಿದರು.
ಭಾರತ ಪರಮಾಣು ಬೆದರಿಕೆಯನ್ನು ಸಹಿಸುವುದಿಲ್ಲ. ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಭವಿಷ್ಯದಲ್ಲಿ ಪಾಕ್ ನಡವಳಿಕೆಯ ಮೇಲೆ
ನಮ್ಮ ನಡೆ ನಿರ್ಧಾರವಾಗುತ್ತದೆ ಎಂದು ಮೋದಿ ಹೇಳಿದ್ದಾರೆ.ಪಾಕಿಸ್ತಾನವು ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಭಾರತವನ್ನು ಬೇಡಿಕೊಂಡ ಬಳಿಕವಷ್ಟೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನು ‘ಅನಾಗರಿಕ ಮುಖ‘ ಎಂದ ಪ್ರಧಾನಿ, ಮಹಿಳೆಯರ ಹಣೆಯಿಂದ ಸಿಂಧೂರ ಕಸಿದ ಈ ದಾಳಿ ನನ್ನ ಮನಸ್ಸಿನ ಮೇಲೆ ಆಗಾಧ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಪರೇಷನ್ ಸಿಂಧೂರ ಕೇವಲ ಹೆಸರಲ್ಲ. ಈ ಕಾರ್ಯಾಚರಣೆಯ ಮೂಲಕ ಭಾರತದ ಸಂಕಲ್ಪ ಕಾರ್ಯರೂಪಕ್ಕೆ ಬಂದಿತು. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು ಎಂದು ಮೋದಿ ಹೇಳಿದ್ದಾರೆ.
ಭಯೋತ್ಪಾದನೆ ಮತ್ತು ವ್ಯಾಪಾರ ಹಾಗೂ ಭಯೋತ್ಪಾದನೆ ಮತ್ತು ಮಾತುಕತೆ ಎಂದಿಗೂ ಜತೆಜತೆಯಾಗಿ ಸಾಗಲು ಸಾಧ್ಯವಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಖಡಕ್ ಸಂದೇಶ ರವಾನಿಸಿದ್ದಾರೆ.‘ಭಯೋತ್ಪಾದನೆ ವಿರುದ್ಧ ‘ಆಪರೇಷನ್ ಸಿಂಧೂರ್’ ಎಂಬುದು ಭಾರತದ ಹೊಸ ನೀತಿಯಾಗಿದೆ. ಸದ್ಯಕ್ಕೆ ನಾವು ಪಾಕಿಸ್ತಾನ ವಿರುದ್ಧದ ಸೇನಾ ಕಾರ್ಯಾಚರಣೆಗೆ ಅಲ್ಪ ವಿರಾಮ ನೀಡಿದ್ದೇವೆ. ಆದರೆ ಭವಿಷ್ಯವು ಅವರ ವರ್ತನೆಯನ್ನು ಅವಲಂಬಿಸಿರಲಿದೆ’ ಎಂದು ತಮ್ಮ 22 ನಿಮಿಷಗಳ ಭಾಷಣದಲ್ಲಿ ಗುಡುಗಿದ್ದಾರೆ.
‘ಇಷ್ಟು ವರ್ಷಗಳ ಕಾಲ ಪಾಕಿಸ್ತಾನವು ಸಾಕಿ, ಸಲುಹಿರುವ ಭಯೋತ್ಪಾದನೆ ಅವರನ್ನೇ ನುಂಗಲಿದೆ. ಪಾಕಿಸ್ತಾನ ಒಂದೊಮ್ಮೆ ಉಳಿಯಬೇಕೆಂದರೆ, ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಬೇಕು. ಇದು ಯುದ್ಧದ ಯುಗವಲ್ಲ. ಹಾಗೆಯೇ ಇದು ಭಯೋತ್ಪಾದನೆಯ ಯುಗವೂ ಅಲ್ಲ’ ಎಂದರು.
‘ಪಾಕಿಸ್ತಾನ ಜತೆಗಿನ ಯಾವುದೇ ಮಾತುಕತೆಯು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಕುರಿತಾಗಿ ಮಾತ್ರ ಇರಲಿದೆ. ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರವನ್ನು ಭಾರತ ನಡೆಸದು. ತನ್ನ ದುಸ್ಸಾಹಸವನ್ನು ನಿಲ್ಲಿಸುವ ವಾಗ್ದಾನ ಮಾಡಿದರಷ್ಟೇ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸುವ ಪಾಕಿಸ್ತಾನದ ಮೊರೆಯನ್ನು ನವದೆಹಲಿ ಪರಿಗಣಿಸಲಿದೆ’ ಎಂದಿದ್ದಾರೆ.
‘ಪಾಕಿಸ್ತಾನವು ತನ್ನ ನೆಲದಲ್ಲಿರುವ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸದ ಹೊರತು ಶಾಂತಿಗೆ ಯಾವುದೇ ಸ್ಥಾನವಿರದು. ನಮ್ಮ ದೇಶದ ಮಹಿಳೆಯರ ಸಿಂಧೂರ ಅಳಿಸಿದ್ದರ ಪರಿಣಾಮ ಏನು ಎಂಬುದು ನಮ್ಮ ಶತ್ರುಗಳಿಗೆ ಈಗ ಅರಿವಾಗಿದೆ. ಮೇ 7ರ ಆಪರೇಷನ್ ಸಿಂಧೂರ ಕೇವಲ ಒಂದು ಹೆಸರಷ್ಟೇ ಅಲ್ಲ, ನಮ್ಮ ಸಂಕಲ್ಪ ಕಾರ್ಯರೂಪಕ್ಕೆ ತಂದ ಪರಿಣಾಮವನ್ನು ಇಡೀ ಜಗತ್ತೇ ನೋಡಿದೆ. ನಮ್ಮ ಕ್ಷಿಪಣಿ, ಡ್ರೋನ್ಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಧ್ವಂಸಗೊಳಿಸಿವೆ. ಅವರ ಕಟ್ಟಡಗಳನ್ನಷ್ಟೇ ಅಲ್ಲ, ಅವರ ಆತ್ಮಬಲವನ್ನೇ ಅಡಗಿಸಿದೆ’ ಎಂದು ಮೋದಿ ಹೇಳಿದ್ದಾರೆ.
‘ಭಯೋತ್ಪಾದನೆ ವಿರುದ್ಧ ಹೋರಾಡುವುದನ್ನು ಬಿಟ್ಟು, ಭಯೋತ್ಪಾದಕರ ನೆಲೆ ಧ್ವಂಸಗೊಳಿಸಿದ ಭಾರತದ ವಿರುದ್ಧ ಪಾಕಿಸ್ತಾನ ಸಮರ ಸಾರಿತು. ನಮ್ಮ ಕಾರ್ಯಾಚರಣೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಪಾಕಿಸ್ತಾನದ ಡ್ರೋನ್ಗಳನ್ನು ನಮ್ಮ ಸೇನೆ ನೆಲಕ್ಕುರುಳಿಸಿದೆ. ನಮ್ಮ ಕ್ಷಿಪಣಿಗಳು ಪಾಕಿಸ್ತಾನದ ವಾಯುನೆಲೆಯನ್ನು ಧ್ವಂಸಗೊಳಿಸಿವೆ’ ಎಂದು ಪ್ರಧಾನಿ ಹೇಳಿದ್ದಾರೆ. ಪಾಕಿಸ್ತಾನದ ಎಂಟು ವಾಯು ನೆಲೆಗೆ ಭಾರೀ ಹಾನಿಯುಂಟು ಮಾಡಿದ ಸಶಸ್ತ್ರ ಪಡೆಯ ಯೋಧರಿಗೆ ಪ್ರಧಾನಿ ಮೋದಿ ಗೌರವ ಸಮರ್ಪಿಸಿದರು.