*ಕಮಲಾಕ್ಷ ನಂಗಾರ್.
ಮೊನ್ನೆ ದಿನಾಂಕ ಜುಲೈ 22 ಸೋಮವಾರ ಜಾಲ್ಲೂರಿನ ಪಾಲಿಗೆ ತುಂಬಲಾರದ ನಷ್ಟದ ದಿನ. ಜಾಲ್ಲೂರಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಪ್ರೇರಣಾದಾಯಿ ಕೊಂಡಿಯೊಂದು ಕಳಚಿಕೊಂಡು ಅನಂತದೆಡೆಗೆ ಪಯಣಿಸಿದ ದಿನ. ಅದೆಷ್ಟೋ ಮಂದಿಯ ಜ್ಞಾನ ದಾಹವನ್ನು ನೀಗಿಸಿದ, ಸಾಮಾಜಿಕ ಬದುಕಿನಲ್ಲೊಂದು ಛಾಪು ಮೂಡಿಸಿದ ತೆರೆಮರೆಯ ಸಾಧಕ, ಜಿಲ್ಲಾ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾರಾಯಣ ಮಾಸ್ತರ್ ಕಾಟೂರು. ಈ ಭೂಮಿಯ
ಕೆಲಸ ಮುಗಿಸಿ ಭಗವಂತನ ಪಾದದಲ್ಲಿ ಲೀನವಾದರೆಂಬುದೆ ದುಃಖಕರ ಸಂಗತಿ.ಜಾಲ್ಲೂರು ಗ್ರಾಮದ ಮಟ್ಟಿಗೆ ಅವರೊಬ್ಬ ಶಿಕ್ಷಕರಾಗದೇ ಗ್ರಾಮದ ಸಂರ್ವಾಗೀಣ ಅಭಿವೃದ್ಧಿಯ ಚಿಂತನೆಯೊಂದಿಗೆ ಬದುಕಿದವರು. ಶಾಲೆಯೊಂದು ಸಾರ್ವಜನಿಕರ, ಹಳೆ ವಿದ್ಯಾರ್ಥಿಗಳ, ಅಧಿಕಾರಿ ವರ್ಗಗಳ ಸಮನ್ವಯತೆಯಿದ್ದರೆ ಯಾವ ರೀತಿ ಪ್ರಗತಿ ಹೊಂದಬಹುದು ಎಂಬುದನ್ನು ತೋರಿಸಿಕೊಟ್ಟ ಅಪರೂಪದ ಶಿಕ್ಷಕ.
1947 ಆಗಸ್ಟ್ 24 ರಂದು ಸುಳ್ಯ ತಾಲೂಕು ಜಾಲ್ಲೂರು ಗ್ರಾಮದ ಕಾಟೂರು ಐತ್ತಪ್ಪ ಗೌಡ ಮತ್ತು ವೆಂಕಮ್ಮ ದಂಪತಿಗಳ 2ನೇ ಪುತ್ರನಾಗಿ ಜನಿಸಿದ ಕಾಟೂರು ನಾರಾಯಣ ಮಾಸ್ತರ್ ದ.ಕ. ಜಿ.ಪ. ಹಿ.ಪ್ರಾ. ಶಾಲೆ ಅಡ್ಯಾರಿನಲ್ಲಿ ಹಿ.ಪ್ರಾ. ಶಿಕ್ಷಣವನ್ನು, ದ.ಕ.ಜಿ.ಪ.ಹಿ.ಪ್ರಾ.ಶಾಲೆ ಸುಳ್ಯದಲ್ಲಿ ಪ್ರೌಢ ಶಿಕ್ಷಣವನ್ನು, ಬೋರ್ಡ್ ಹೈಸ್ಕೂಲ್ ಸುಳ್ಯದಲ್ಲಿ ಮುಗಿಸಿ ನಂತರ ಕೂಡಿಗೆಯಲ್ಲಿ ತನ್ನ ಟಿ.ಸಿ.ಹೆಚ್. ತರಬೇತಿಯನ್ನು ಮುಗಿಸಿದರು. 1970ರಲ್ಲಿ ಪುತ್ತೂರು ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿತ್ತಡಿಯಲ್ಲಿ ತನ್ನ ಅಧ್ಯಾಪಕ ಜೀವನ ಪ್ರಾರಂಭಿಸಿದ ಅವರು ನಂತರ ದ.ಕ.ಜಿ.ಪ.ಹಿ.ಪ್ರಾ. ಶಾಲೆ ಅಡ್ಕಾರು ಮತ್ತು ದ.ಕ.ಜಿ.ಪ.ಹಿ.ಪ್ರಾ. ಶಾಲೆ ಕದಿಕಡ್ಕದಲ್ಲಿ ಮುಖ್ಯ ಗುರುಗಳಾಗಿ ತನ್ನ ವೃತ್ತಿ ಜೀವನ ಮುಂದುವರಿಸಿದರು. ಕದಿಕಡ್ಕ ಶಾಲೆಯಲ್ಲಿ 20 ವರುಷ ಸೇವೆ ಸಲ್ಲಿಸುವ ಸಮಯದಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರು. ಆ ಸಮಯದಲ್ಲಿ ಆಟದ ಮೈದಾನ ವಿಸ್ತರಣೆ, ಶಾಲಾ ವನ ನಿರ್ಮಾಣ.
ಮೂಲಭೂತ ಸೌಲಭ್ಯಗಳ ಜೋಡಣೆಯೊಂದಿಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ತೊಡಗಿಸಿಕೊಂಡವರು. ಶಾಲಾ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರ ಕೊರತೆಯಿದ್ದರೂ ಸ್ವತಃ ದೈಹಿಕ ಶಿಕ್ಷಣದ ತರಬೇತಿ ನೀಡಿ ಕ್ರೀಡಾ ಪ್ರತಿಭೆಗಳಿಗೆ ವಿಶೇಷ ತರಬೇತಿಯೊಂದಿಗೆ ಕಬಡ್ಡಿಯಲ್ಲಿ ಒಂದು ಅತ್ಯುತ್ತಮ ತಂಡವನ್ನು ಕಟ್ಟಿದ ಹಿರಿಮೆ ಕಾಟೂರು ಮಾಸ್ತರದ್ದು.
ಕಾಟೂರು ಮಾಸ್ತರ್ ಕೇವಲ ಶಿಕ್ಷಣಕಷ್ಟೆ ಮೀಸಲಾಗಿರಲಿಲ್ಲ. ಅವರೋರ್ವ ಕಲಾ ಪೋಷಕ, ಸಾಂಸ್ಕೃತಿಕವಾಗಿ ಅನೇಕ ಸಂಘ ಸಂಸ್ಥೆಗಳಿಗೆ ಜೀವ ತುಂಬಿದವರು. ಜಾಲ್ಲೂರಿನ ಶ್ರೀಗುರು ಯುವಕ ಮಂಡಲ, ಶೃತಿ ಯುವತಿ ಮಂಡಲ, ಹಿಂದೂ ಕಲಾ ಕೇಸರಿ ಮುಂತಾದ ಸಂಘಟನೆಗಳ ಬೆನ್ನೆಲುಬಾಗಿ ನಿಂತು ಆ ಸಂಘಟನೆಗಳ ಸದಸ್ಯರು ಸಾಂಸ್ಕೃತಿಕವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸುವಲ್ಲಿ ಕಾಟೂರು ಮಾಸ್ತರ ಪಾಲು ದೊಡ್ಡದು. ಅವರು ತೋರಿದ ಸಹಾಯ ಮತ್ತು ಮಾರ್ಗದರ್ಶನ ಇಂದು ಎಲ್ಲರೂ ನೆನಪಿಸುವಂತೆ ಮಾಡಿದೆ.ಧಾರ್ಮಿಕವಾಗಿ ಮಾಸ್ತರು ತನ್ನನ್ನು ತಾನು ತೊಡಗಿಸಿಕೊಂಡು ಜಾಲ್ಸೂರಿನ ಯಾವುದೇ ಧಾರ್ಮಿಕ ಕಾರ್ಯಗಳಿಗೆ ನಿರ್ಮಲ ಮನಸ್ಸಿನಿಂದ ದೇಣಿಗೆ ನೀಡಿ ಧಾರ್ಮಿಕತೆಗೆ ಜೋಡಿಸಿಕೊಂಡವರು. ಜಾಲ್ಸೂರಿನ ಶ್ರೀಗುರು ರಾಘವೇಂದ್ರ ಸ್ವಾಮಿ ಭಜನಾ ಮಂದಿರ, ಸಾರ್ವಜನಿಕ ಗಣೇಶೋತ್ಸವ ಮತ್ತು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ತನ್ನ ಸಹಾಯಧನದೊಂದಿಗೆ ಅದರ ನಿರಂತರತೆಗೆ ಸಾಕ್ಷಿಯಾದವರು ಕಾಟೂರು ಮಾಸ್ತರ್.
ಸುಮಾರು 1997ರ ಸಮಯದಲ್ಲಿ ಕದಿಕಡ್ಕ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ, ಲೇಖನಿ ಸಾಮಾಗ್ರಿ, ಕೊಡೆ, ಶಾಲಾ ಬ್ಯಾಗ್ ಮುಂತಾದ ಶೈಕ್ಷಣಿಕ ಸಾಮಾಗ್ರಿಗಳನ್ನು ಸ್ವಂತ ಖರ್ಚಿನಿಂದ ನೀಡಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಮಹಾನ್ ವ್ಯಕ್ತಿ ಕಾಟೂರು ಮಾಸ್ತರ್. ಅವರು ಅಂದು ಮಾಡಿದ ಸಹಾಯದ ಫಲವೇ ಅನೇಕ ಜನ ಇಂದು ಉನ್ನತ ವಿದ್ಯಾಭ್ಯಾಸದೊಂದಿಗೆ ಉತ್ತಮ ಉದ್ಯೋಗ ಪಡೆದು ದೇಶ ವಿದೇಶದಲ್ಲಿ ನೆಲೆಸಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.
ಸಾಮಾಜಿಕ ಚಿಂತನೆಯ ಕಾಟೂರು ಮಾಸ್ತರ್ ರಾಷ್ಟ್ರ ಕಾರ್ಯಕ್ಕೂ ಒಗ್ಗಿಸಿಕೊಂಡವರು. ದೇಶಾಭಿಮಾನದ ಅನೇಕ ಕೆಲಸ ಕಾರ್ಯಗಳು ನಡೆದಾಗ ತಾನೋರ್ವ ಸರಕಾರಿ ಉದ್ಯೋಗಿ ಎಂಬುದನ್ನೇ ಮರೆತು ಅನೇಕ ಜನರಿಗೆ ನೆರವಾದವರು. ತನ್ನ ವೈಯಕ್ತಿಕ ಬದುಕಿನಲ್ಲಿ ತಾನು ನಂಬಿದ ತತ್ವಗಳೊಂದಿಗೆ ಬದುಕಿದವರು. ಅದೆಷ್ಟೋ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದವರು. ಗ್ರಾಮದ ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತನಾಗಬಾರದೆಂಬ ಮಹಾತ್ವಕಾಂಕ್ಷೆಯಿಂದ ತನ್ನ ಸ್ವಂತ ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದ ಮಾಸ್ತರ್ ಅವರು ಎಲ್ಲಾ ಅಗತ್ಯತೆಗಳನ್ನು ಪೂರೈಸಿದವರು.ಬಹುಶಃ ಅಸಂಖ್ಯಾ ಶಿಷ್ಯ ವೃಂದವನ್ನು ಹೊಂದಿದ ಮಾಸ್ತರ್ ಈ ಎಲ್ಲಾ ಅರ್ಹತೆಗಳಿಂದಾಗಿಯೇ 2000-2001ನೇ ಸಾಲಿನಲ್ಲಿ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿ ಊರಿಗೆ ಮತ್ತು ಶಾಲೆಗೆ ಕೀರ್ತಿ ತಂದವರು.
ಅದ್ಭುತವಾದ ಚಿಂತನೆ, ಅದನ್ನು ಕಾರ್ಯಗತಗೊಳಿಸುವ ಇಚ್ಛಾಶಕ್ತಿ, ಮುನ್ನುಗ್ಗಿ ಹೋಗುವ ಪ್ರವೃತ್ತಿ ಮತ್ತು ನಿರಂತರ ಕಷ್ಟದ ಜನರಿಗೆ ಸ್ಪಂದಿಸುವ ಗುಣ ಕಾಟೂರು ಮಾಸ್ತರವರನ್ನು ಗ್ರಾಮದ ತುಂಬಾ ಚಿರಪರಿಚಿತವಾಗಿಸಿತ್ತು. ತನ್ನ ನಿಷ್ಕಲ್ಮಷ ಮನಸ್ಸಿನಿಂದ ಅವರು ನೀಡಿದ ಸಹಾಯಗಳು ಇಂದು ಅವರ ಹೆಸರನ್ನು ಶಾಶ್ವತವಾಗಿಸಿದೆ ಎಂದರೆ ತಪ್ಪಾಗಲಾರದು. ಬದುಕು ಮತ್ತು ಚಿಂತನೆಗಳಿಗೆ ಒಪ್ಪಿಕೊಂಡ ಮಾಸ್ತರ್ ಒರ್ವ ಶ್ವೇತ ವಸ್ತ್ರದಾರಿ. ತನ್ನ ಕರ್ಮ ಭೂಮಿಯಲ್ಲಿ ದುಡಿದು ಸಂಪತ್ತನ್ನು ಸಮಾಜಕ್ಕೆ ನೀಡುವಲ್ಲಿ ಧೈರ್ಯ ತೋರಿದ ದಾನಿಯಾಗಿ, ಅದೆಷ್ಟೋ ಜನರ ಜ್ಞಾನದಾಹ ನೀಗಿದ ಗುರುವಾಗಿ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದ ಪ್ರೇರಣಾದಾಯಕ ವ್ಯಕ್ತಿಯಾಗಿ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದವರು. ಅವರ ಹೆಜ್ಜೆ ಗುರುತುಗಳೇ ಅವರ ಶಿಷ್ಯ ವರ್ಗಕ್ಕೆ ದಾರಿದೀಪವಾಗಲಿ. ಅವರ ನಿರ್ಮಲ ಮನಸ್ಸಿನ ಚಿಂತನೆಗಳು ಸರ್ವರ ಬಾಳಿಗೆ ಪ್ರೇರಣೆಯಾಗಲಿ ಮತ್ತು ಮುಂದಿನ ಜನಾಂಗಕ್ಕೆ ದಾರಿದೀಪವಾಗಲೆಂದು ಬೇಡುತ್ತಾ ಒಂದು ಶೂನ್ಯವನ್ನು ನಿರ್ಮಿಸಿ, ಅನಂತದೆಡೆಗೆ ಪಯಾಣಿಸಿದ ಅಜಾತಶತ್ರು, ಅಕ್ಷರ ಕಲಿಸಿದ ಗುರುಗಳು, ಸಂಸ್ಕಾರ ಕಲಿಸಿದ ಹಿತೈಷಿಗಳೂ, ಬದುಕು ಕಟ್ಟುವಲ್ಲಿ ಪ್ರೇರಣೆಯಾದ ಮಾರ್ಗದರ್ಶಕರೂ ಆದ ಕಾಟೂರು ನಾರಾಯಣ ಮಾಸ್ತರಿಗೆ ನನ್ನ ಅಕ್ಷರ ನಮನ.