ಸುಳ್ಯ:ತಲೆಗೆ ಕಲ್ಲು ಹಾಕಿ ವ್ಯಕ್ತಿಯೋರ್ವರ ಕೊಲೆ ಮಾಡಿರುವ ಘಟನೆಯ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಲೆಗೈದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಸುಳ್ಯ ಸಮೀಪದ ಕಾಂತಮಂಗಲ ಸರಕಾರಿ ಶಾಲಾ ಜಗಲಿಯಲ್ಲಿ ಸೋಮವಾರ ಬೆಳಗ್ಗೆ ಪತ್ತೆಯಾಗಿತ್ತು. ರವಿವಾರ ರಾತ್ರಿ ಘಟನೆ ನಡೆದಿರುವ ಬಗ್ಗೆ ಶಂಕಿಸಲಾಗಿದೆ.ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವಂತೆ ಕಂಡುಬಂದಿದೆ. ರಕ್ತದ ಮುಡುವಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಕೊಡಗು ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ವಸಂತ (45) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪ್ರಕರಣದ ಬಗ್ಗೆ ಪೊಲೀಸರು ವಿವಿಧ
ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಎಸ್ಪಿ ಸಿ.ಬಿ.ರಿಷ್ಯಂತ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.
ವಿರಾಜೆಪೇಟೆಯವರಾದ ವಸಂತ ಕುದುರೆಪಾಯದಿಂದ ವಿವಾಹವಾಗಿದ್ದು, ಅಲ್ಲೇ ನೆಲೆಸಿದ್ದರು ಎನ್ನಲಾಗಿದೆ. ವಸಂತ್ ಕಳೆದ ಕೆಲವು ಸಮಯದಿಂದ ಕಡಬ ತಾಲೂಕಿನ ಕಾಣಿಯೂರು ಎಂಬಲ್ಲಿ ಕೆಲಸ ನಿರ್ವಹಿಸುತ್ತಿದ್ದು, ರವಿವಾರ ಅಲ್ಲಿಂದ ಸಂಬಳ ಪಡೆದು ಬಂದಿದ್ದರು ಎಂದು ತಿಳಿದುಬಂದಿದೆ. ತಲೆಗೆ ಕಲ್ಲು ಎತ್ತಿ ಹಾಕಿ ಕೃತ್ಯ ಎಸಗಿದ್ದರಿಂದ ಮುಖದ ಗುರುತು ಸಿಗುವಂತಿರಲಿಲ್ಲ. ಸ್ಥಳೀಯ ವ್ಯಕ್ತಿ ಅಲ್ಲ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿತ್ತು. ಸುದ್ದಿ ಹಬ್ಬಿದ ಹಿನ್ನಲೆಯಲ್ಲಿ ಅಪರಾಹ್ನ ಕಾಣಿಯೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮನೆಯವರು ಆಗಮಿಸಿ ಗುರುತು ಪತ್ತೆ ಹಚ್ಚಿದ್ದಾರೆ. ಬಳಿಕ ಮೃತರ ಪತ್ನಿಯೂ ಆಗಮಿಸಿ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ್ದಾರೆ.
ಸೋಮವಾರ ಬೆಳಗ್ಗೆ ಘಟನೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಬಳಿಕ
ಪೊಲೀಸರಿಗೆ ಮಾಹಿತಿ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ., ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ ಡಿ.ಎಸ್., ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ, ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಸುಳ್ಯ ಎಸೈ ಮಹೇಶ್, ಸುಬ್ರಹ್ಮಣ್ಯ ಎಸೈ ಕಾರ್ತಿಕ್ ಸೇರಿದಂತೆ ಪೊಲೀಸ್ ಅಕಾರಿಗಳು, ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳ, ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.
ಪ್ರಕರಣದ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತಿದೆ. ಹೆಚ್ಚಿನ ಮಾಹಿತಿ ಈಗ ನೀಡಲು ಸಾಧ್ಯವಿಲ್ಲ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್ಪಿ ರಿಷ್ಯಂತ್ ಪ್ರತಿಕ್ರಿಯೆ ನೀಡಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳದಲ್ಲಿ ಎರಡು ಮದ್ಯದ ಪ್ಯಾಕೆಟ್, ಒಂದು ಸಿಮ್ ಕಾರ್ಡ್ ಪತ್ತೆಯಾಗಿದೆ. ಇದರ ಕುರಿತು ತನಿಖೆ ನಡೆಸಲಾಗುತಿದೆ.
ವಾರದಲ್ಲಿ ಎರಡನೇ ಘಟನೆ:
ವಾರದ ಅಂತದಲ್ಲಿ ಸುಳ್ಯ ತಾಲೂಕಿನಲ್ಲಿ ಎರಡು ಕೊಲೆ ಪ್ರಕರಣ ನಡೆದಂತಾಗಿದೆ. ಕಳೆದ ವಾರ ಬೆಳ್ಳಾರೆ ಪೇಟೆಯಲ್ಲಿ ನಳಿನಿ ಎಂಬ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ನಡೆಸಲಾಗಿತ್ತು. ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಘಟನೆ ನಡೆದ ವಾರದಲ್ಲೇ ಸುಳ್ಯದ ಕಾಂತಮಂಗಲದಲ್ಲೂ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಕೃತ್ಯ ಎಸಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.