ಟ್ರಿನಿಡಾಡ್: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ನ ವೇಗದ ಬೌಲರ್ ಲಾಕಿ ಫರ್ಗ್ಯೂಸನ್ ನೂತನ ದಾಖಲೆ ಬರೆದಿದ್ದಾರೆ.
ನಾಲ್ಕು ಓವರ್ಗಳಲ್ಲಿ ಮೇಡನ್ ಸಾಧನೆ ಮಾಡಿರುವ ಫರ್ಗ್ಯೂಸನ್ ಒಂದೇ ಒಂದು ರನ್ ಕೂಡ ಬಿಟ್ಟುಕೊಡಲಿಲ್ಲ. ಅಲ್ಲದೆ ಮೂರು ವಿಕೆಟ್ ಪಡೆದಿದ್ದಾರೆ(4-4-0-3). ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ನಲ್ಲಿ ಎಲ್ಲ
ನಾಲ್ಕು ಓವರ್ಗಳಲ್ಲಿ ಮೇಡನ್ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿದ್ದಾರೆ.ಈ ಹಿಂದೆ 2021ರ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕೆನಡಾದ ಸಾದ್ ಬಿನ್ ಜಾಫರ್ (4–4–0–2) ಅವರು ಪನಮಾ ವಿರುದ್ಧ ಎಲ್ಲ ನಾಲ್ಕು ಓವರ್ಗಳಲ್ಲಿ ಮೇಡನ್ ಸಾಧನೆ ಮಾಡಿದ್ದರು.
ಟ್ರೆಂಟ್ ಬೌಲ್ಟ್ ವಿದಾಯ:
ಟಿ20 ವಿಶ್ವಕಪ್ಗೆ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್ ವಿದಾಯ ಹೇಳಿದ್ದಾರೆ. ತನ್ನ ಕೊನೆಯ ಟ್ವೆಂಟಿ20- ವಿಶ್ವಕಪ್ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ 14 ರನ್ ತೆತ್ತು ಎರಡು ವಿಕೆಟ್ ಗಳಿಸಿದರು. ಸಿ’ ಗುಂಪಿನ ಔಪಚಾರಿಕ ಪಂದ್ಯದಲ್ಲಿ ಪಾಪುವಾ ನ್ಯೂಗಿನಿ ವಿರುದ್ಧ ಏಳು ವಿಕೆಟ್ ಅಂತದ ಜಯ ಗಳಿಸಿದ ನ್ಯೂಜಿಲೆಂಡ್, ಅಭಿಯಾನ ಕೊನೆಗೊಳಿಸಿತು.ಫರ್ಗ್ಯೂಸನ್ ದಾಳಿಗೆ ತತ್ತರಿಸಿದ ಪಾಪುವಾ ಕೇವಲ 78 ರನ್ನಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ತನ್ನ ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 12.2 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು.