ಸುಳ್ಯ: ವಿಶ್ವ ಹಿಂದೂ ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ 11ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ಶೋಭಾ ಯಾತ್ರೆ ಇಂದು(ಸೆ.4) ಸುಳ್ಯದಲ್ಲಿ ನಡೆಯಲಿದೆ. ಸುಳ್ಯದಲ್ಲಿ 17 ಕಡೆಗಳಲ್ಲಿ ಸಾಹಸಮಯ ಅಟ್ಟಿ ಮಡಿಕೆ ಒಡೆಯುವ
ಉತ್ಸವ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡು ರಾತ್ರಿ 9 ಗಂಟೆಯ ತನಕ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಚೆನ್ನಕೇಶವ ದೇವಸ್ಥಾನದ ಬಳಿಯಿಂದ ಶೋಭಾ ಯಾತ್ರೆಗೆ ಡಾ.ಹರಪ್ರಸಾದ್ ತುದಿಯಡ್ಕ ಚಾಲನೆ ನೀಡುವರು.ಬಳಿಕ ನಗರದಲ್ಲಿ ಶೋಭಾಯಾತ್ರೆಯ ಮೂಲಕ ತೆರಳಿ 17 ಕಡೆಗಳಲ್ಲಿ ಸ್ಥಾಪಿಸಿದ ಅಟ್ಟಿ ಮಡಿಕೆಗಳನ್ನು ಒಡೆಯಲಾಗುವುದು. ಚೆನ್ನಕೇಶವ ದೇವಸ್ಥಾನದ ಮೈದಾನದಲ್ಲಿ ವಿಶೇಷ ಆಕರ್ಷಣೆಯ ಅಟ್ಟಿ ಮಡಿಕೆ ಸ್ಥಾಪಿಸಲಾಗಿದೆ. ಸಂಜೆ
6ಕ್ಕೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಹಾಗೂ ಖ್ಯಾತ ಅಂಕಣಕಾರಾದ ಪ್ರತಾಪ ಸಿಂಹ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ನಿಕಟ ಪೂರ್ವ ಅಧ್ಯಕ್ಷ ಗಣಪತಿ ಮಜಿಗುಂಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸುವರು. ಹಿರಿಯ ದೈವ ನರ್ತಕರಾದ ಕೇಪು ಅಜಿಲ ಗೌರವ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿಹಿಂಪ ಮಂಗಳೂರು ವಿಭಾಗ ಪ್ರಚಾರ ಪ್ರಸಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕರಾದ ಪುನೀತ್ ಅತ್ತಾವರ, ವಿಹಿಂಪ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಭಾಗವಹಿಸಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷದ್ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.