ಸುಳ್ಯ: ಸುಳ್ಯ ನಗರದ ಹಳೆಗೇಟು-ಜಯನಗರ ರಸ್ತೆಯಲ್ಲಿ ಪೈಪ್ ಲೈನ್ ಅಲವಡಿಕೆಗೆಂದು ತೆಗೆದು ಸರಿಯಾಗಿ ಮುಚ್ಚದೆ ಅಪಾಯಕಾರಿಯಾಗಿದ್ದ ಹೊಂಡಕ್ಕೆ ಕೊನೆಗೂ ಮುಕ್ತಿ ದೊರೆತಿದೆ. ರಸ್ತೆಯಲ್ಲಿ ಬಾಯ್ದೆರೆದ ಅಪಾಯಕಾರಿ ಹೊಂಡದ ಕುರಿತು ಇಂದು ಬೆಳಿಗ್ಗೆ ‘ಸುಳ್ಯ ಮಿರರ್’ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅವರು ಹೊಂಡವನ್ನು ಕೂಡಲೇ
ಮುಚ್ಚುವಂತೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಮಧ್ಯಾಹ್ನದ ವೇಳೆಗೆ ಕಾಂಕ್ರೀಟ್ ಮಿಕ್ಸ್ ಹಾಕಿ ಹೊಂಡವನ್ನು ಮುಚ್ಚಲಾಗಿದೆ. ಪೈಪ್ ಲೈನ್ ಅಳವಡಿಕೆಗೆಂದು ಕೆಲವು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಮಾಡಲಾದ ಹೊಂಡ ಮುಚ್ಚಿಲ್ಲ.ಎರಡು ದಿನಗಳ ಹಿಂದೆ ಹೊಂಡವನ್ನು ಅಗೆದು ಇನ್ನಷ್ಟು ದೊಡ್ಡದು ಮಾಡಲಾಗಿತ್ತು.

ಇದರಿಂದ ರಸ್ತೆ ಮಧ್ಯೆ ಮರಣ ಗುಂಡಿ ಬಾಯ್ದೆರೆದುಕೊಂಡಿತ್ತು.ಈ ಆವಾಂತರದ ಕುರಿತು ಮಿರರ್ ವರದಿ ಪ್ರಕಟಗೊಂಡ ಬೆನ್ನಲ್ಲೇ ವರದಿ ಗಮನಿಸಿದ ನ.ಪಂ.ಅಧ್ಯಕ್ಷರು ಕೂಡಲೇ ಈ ಹೊಂಡ ಮುಚ್ಚುವಂತೆ ಸೂಚಿಸಿದ್ದರು.ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಗೆಂದು ರಸ್ತೆ ಬದಿ ಮತ್ತು ರಸ್ತೆ ಮಧ್ಯೆ ಅಗೆದು ಹಾಕಲಾಗಿದ್ದು ಅದನ್ನು ಸಮರ್ಪಕವಾಗಿ ಮುಚ್ವದೆ ಹಲವು ಕಡೆ, ಹೊಂಡಗಳು ದೂಳು ತುಂಬಿ ಆವಾಂತರ ಸೃಷ್ಠಿಯಾಗಿದೆ. ಹಳೆಗೇಟು ಜಯನಗರ

ರಸ್ತೆಯಲ್ಲಿಯೂ ಹತ್ತಾರು ಕಡೆ ಕಾಂಕ್ರೀಟ್, ಡಾಮರು ರಸ್ತೆಗಳನ್ನು ಕಡಿದು ಹಾಕಲಾಗಿದ್ದು ಸಮರ್ಪಕವಾಗಿ ಮುಚ್ಚಿಲ್ಲ. ನಗರದಲ್ಲಿ ವಿವಿಧ ಕಡೆಗಳಲ್ಲಿ ಈ ರೀತಿ ತೆಗೆದ ಹೊಂಡಗಳನ್ನು ಮುಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
