ಸುಳ್ಯ: ಪೈಪ್ ಲೈನ್ ಅಳವಡಿಕೆಗೆಂದು ಕೆಲವು ತಿಂಗಳ ಹಿಂದೆ ರಸ್ತೆಯನ್ನು ಅಗೆದು ಮಾಡಲಾದ ಹೊಂಡ ಮುಚ್ಚಿಲ್ಲ. ವಾಹನ ಸವಾರರು ಆಗೂ ಹೀಗೂ ಸಂಚರಿಸುತ್ತಿದ್ದರು. ಎರಡು ದಿನಗಳ ಹಿಂದೆ ಹೊಂಡವನ್ನು ಅಗೆದು ಇನ್ನಷ್ಟು ದೊಡ್ಡದು ಮಾಡಲಾಗಿದೆ. ಇದೀಗ ರಸ್ತೆ ಮಧ್ಯೆ ಮರಣ ಗುಂಡಿ ಬಾಯ್ದೆರೆದುಕೊಂಡಿದೆ. ಈ ರೀತಿ ಆವಾಂತರ ಸೃಷ್ಠಿಸಿರುವುದು ಹಳೆಗೇಟು- ಜಯನಗರ ರಸ್ತೆಯ ಹೊಸಗದ್ದೆ ತಿರುವಿನಲ್ಲಿ. ಪರಿಣಾಮ ರಸ್ತೆ ಮಧ್ಯೆ
ಅಪಾಯ ಅಹ್ವಾನಿಸುವಂತಿದೆ. ಎರಡು ದಿನದ ಹಿಂದೆ ಕೆಲವು ಕಾರ್ಮಿಕರು ಬಂದು ಈ ಹೊಂಡವನ್ನು ಅಗೆದಾಗ ಇದನ್ನು ಸರಿಪಡಿಸುತ್ತಾರೋ ಎಂಬ ನಿರೀಕ್ಷ ಹುಟ್ಟಿತ್ತು. ಆದರೆ ಅಗೆದ ಹೊಂಡವನ್ನು ಹಾಗೇ ಬಿಟ್ಟು ಹೋಗಿರುವುದರಿಂದ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾರು,ರಿಕ್ಷಾ, ಬೈಕ್ ಸೇರಿದಂತೆ ಹೊಂಡದಲ್ಲಿ ಬಿದ್ದು ಏಳಲಾಗದೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ತಿರುವಿನಲ್ಲಿ ಆದ ಕಾರಣ ಬರುವ ವಾಹನಗಳು ನೇರವಾಗಿ ಹೊಂಡಕ್ಕೆ ಬೀಳುತಿದೆ. ರಸ್ತೆ ಪೂರ್ತಿ ಹೊಂಡ

ಮಾಡಲಾಗಿದ್ದು ಹೊಂಡ ತಪ್ಪಿಸಲು ಆಗುತ್ತಿಲ್ಲ. ಪರಿಣಾಮ ಅಪಘಾತಗಳು ಸಂಭವಿಸುತ್ತಿದೆ. ವಾಹನಗಳು ಹೊಂಡಕ್ಕೆ ಬೀಳುವ ಶಬ್ದ ಅಪಾಯದ ಸೂಚನೆ ನೀಡಿ ಮೊಳಗುತಿದೆ.ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಪೈಪ್ ಅಳವಡಿಕೆಗೆಂದು ರಸ್ತೆ ಬದಿ ಮತ್ತು ರಸ್ತೆ ಮಧ್ಯೆ ಅಗೆದು ಹಾಕಲಾಗಿದ್ದು ಅದನ್ನು ಸಮರ್ಪಕವಾಗಿ ಮುಚ್ವದೆ ಆವಾಂತರ ಸೃಷ್ಠಿಯಾಗಿದೆ. ಹಳೆಗೇಟು ಜಯನಗರ ರಸ್ತೆಯಲ್ಲಿಯೂ ಹತ್ತಾರು ಕಡೆ ಕಾಂಕ್ರೀಟ್, ಡಾಮರು ರಸ್ತೆಗಳನ್ನು ಕಡಿದು ಹಾಕಲಾಗಿದ್ದು ಸಮರ್ಪಕವಾಗಿ ಮುಚ್ಚಿಲ್ಲ.

ಕುಡಿಯುವ ನೀರು ಮೂಲಭೂತ ಅವಶ್ಯಕತೆ ಸರಿ ಹಾಗೆಂದು, ಪೈಪ್ ಅಳವಡಿಕೆಂದು ಮತ್ತೊಂದು ಅತೀ ಅಗತ್ಯವಾದ ರಸ್ತೆಯನ್ನು ಈ ರೀತಿ ಕಡಿದು ಹಾಕುವುದು ಎಷ್ಟು ಸರಿ…? ಇದಕ್ಕೆ ಕಾನೂನು.. ಹೇಳುವವರು, ಕೇಳುವವರು ಯಾರೂ ಇಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.. ಈ ರೀತಿ ರಸ್ತೆ ಮಧ್ಯೆ ಹೊಂಡ ಕಡಿದು ಹಾಕಿ ಅಪಾಯ ಸಂಭವಿಸಿದರೆ ಯಾರು ಹೊಣೆ ಎಂದು ಜನ ಪ್ರಶ್ನಿಸುತ್ತಿದ್ದಾರೆ… ಉತ್ತರ ಕೊಡಬೇಕಾದವರು, ಸರಿ ಪಡಿಸಬೇಕಾದವರು ಮೌನಕ್ಕೆ ಶರಣಾಗಿದ್ದಾರೆ.