ರಾಂಚಿ:20 ಓವರ್ಗಳಲ್ಲಿ 249 ರನ್ಗಳ ಬೃಹತ್ ಮೊತ್ತ ಕಲೆಹಾಕಿದರೂ ಬೌಲಿಂಗ್ ವೈಫಲ್ಯದಿಂದ ಟೀಂ ಇಂಡಿಯಾಕ್ಕೆ ಸೋಲಾಗಿದೆ. ನಾಯಕ ಶಾಯ್ ಹೋಪ್ ಅವರ ಸ್ಫೋಟಕ ಶತಕ ಹಾಗೂ ಶೆರ್ಫೇನ್ ರುದರ್ಫೋರ್ಡ್ ವಿಧ್ವಂಸಕ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡವು ಭಾರತ ನೀಡಿದ್ದ ಬೃಹತ್ ಗುರಿಯನ್ನು 18.3 ಓವರ್ಗಳಲ್ಲಿ
ತಲುಪಿ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತದ ಪರ ಸಂಜು ಸ್ಯಾಮ್ಸನ್ 82 ರನ್ ಗಳಿಸಿದರೆ, ಇಶಾನ್ ಕಿಶನ್ 22 ಬೌಲ್ಗೆ 43, ಐಯ್ಯರ್ 18 ಬೌಲ್ಗೆ 40, ತಿಲಕ ವರ್ಮಾ 18 ಬಾಲ್ 44 ರನ್ ಗಳಿಸಿದರು. ಆದರೆ ಬೌಲಿಂಗ್ ಕೈಕೊಟ್ಟ ಕಾರಣ ಭಾರತ ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
250 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭದಲ್ಲೇ ದೊಡ್ಡ ಆಘಾತ ಎದುರಾಯಿತು. ಭಾರತದ ಯುವ ವೇಗಿ ಮಯಾಂಕ್ ಯಾದವ್ ತಮ್ಮ ಮಾರಕ ದಾಳಿಯ ಮೂಲಕ ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಪೂರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರನ್ನು ಪೆವಿಲಿಯನ್ಗೆ ಕಳುಹಿಸಿ ಪ್ರವಾಸಿ ತಂಡವನ್ನು ಆರಂಭಿಕ ಸಂಕಷ್ಟಕ್ಕೆ ಸಿಲುಕಿಸಿದರು.ವಿಂಡೀಸ್ ಕೇವಲ 5 ರನ್ಗಳಿಗೆ 2 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ತತ್ತರಿಸಿತು. ಪವರ್ಪ್ಲೇ ಅಂತ್ಯದ ವೇಳೆಗೆ ಪೊವೆಲ್ ಕೂಡ ಔಟಾಗುವುದರೊಂದಿಗೆ ಭಾರತ ಸಂಪೂರ್ಣ ನಿಯಂತ್ರಣ ಸಾಧಿಸಿತ್ತು.
ಆರಂಭಿಕ ಕುಸಿತದ ಬಳಿಕ ಕ್ರೀಸ್ಗೆ ಬಂದ ನಾಯಕ ಶಾಯ್ ಹೋಪ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಭಾರತೀಯ ಬೌಲಿಂಗ್ ವಿಭಾಗವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದರು. ಶಾಯ್ ಹೋಪ್ ಕೇವಲ 45 ಎಸೆತಗಳಲ್ಲಿ ಅಜೇಯ 102 ರನ್ಗಳ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಅಬ್ಬರಿಸಿದ ಶೆರ್ಫೇನ್ ರುದರ್ಫೋರ್ಡ್ ಕೇವಲ 37 ಎಸೆತಗಳಲ್ಲಿ 84 ರನ್ ಬಾರಿಸಿದರು. ಈ ಜೋಡಿಯು ಟೀಮ್ ಇಂಡಿಯಾ ಬೌಲರ್ಗಳ ಮೇಲೆ ನಡೆಸಿದ ದಾಳಿಯ ಪರಿಣಾಮವಾಗಿ, ಕೆರಿಬಿಯನ್ನರು 18.3 ಓವರ್ಗಳಲ್ಲಿಯೇ 4 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ ಗುರಿ ತಲುಪಿತು. ಈ ಮೂಲಕ ವಿಂಡೀಸ್ ಟಿ20 ಕ್ರಿಕೆಟ್ ಇತಿಹಾಸದ ಎರಡನೇ ಅತ್ಯಂತ ದೊಡ್ಡ ಗುರಿ ಬೆನ್ನತ್ತಿದ ದಾಖಲೆ ಬರೆಯಿತು.







