ನಾಗೋಯಾ:ಜಪಾನ್ ಆತಿಥ್ಯದಲ್ಲಿ ನಾಗೋಯಾ ನಗರದಲ್ಲಿ ನಡೆದ ಏಷ್ಯನ್ ಗೇಮ್ಸ್ ಸಮಾರೋಪಗೊಂಡಿತು.ಭಾರತ ಒಟ್ಟು 85 ಪದಕಗಳನ್ನು ಪಡೆದು ನಾಲ್ಕನೇ ಸ್ಥಾನ ಪಡೆದಿದೆ.
21 ಚಿನ್ನ, 27 ಬೆಳ್ಳಿ, 37 ಕಂಚು ಪದಕಗಳನ್ನು ಪಡೆದಿದೆ.ಕಳೆದ ಬಾರಿ 106 ಪದಕ ಪಡೆದಿದ್ದ ಭಾರತಕ್ಕೆ ಈ ಬಾರಿ 21 ಪದಕ ಕಡಿಮೆಯಾಗಿದೆ. ಅಂದು ಭಾರತದ ಅಥ್ಲೀಟ್ಗಳು
28 ಚಿನ್ನ, 38 ಬೆಳ್ಳಿ ಮತ್ತು 40 ಕಂಚಿನೊಂಡಿಗೆ 106 ಪದಕಗಳಿಗೆ ಕೊರಳೊಡ್ಡಿದ್ದರು. ಆದರೆ, ಈ ಬಾರಿ ಅದೇ ಪ್ರದರ್ಶನ ಮುಂದುವರಿಸಲು ಸಾಧ್ಯವಾಗಿಲ್ಲ. ಭಾರತವು 269 ಪುರುಷ ಹಾಗೂ 234 ಮಹಿಳಾಅಥ್ಲೀಟ್ಗಳನ್ನು ಒಳಗೊಂಡ 503 ಸದಸ್ಯರ ತಂಡದೊಂದಿಗೆ 36 ಸ್ಪರ್ಧೆಗಳಲ್ಲಿ ಪೈಪೋಟಿ ನಡೆಸಿತ್ತು.ಪದಕ ಬೇಟೆಯಲ್ಲಿ
ಚೀನಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಈ ಬಾರಿಯ ಕೂಟದಲ್ಲಿ ಬರೋಬ್ಬರಿ 169 ಚಿನ್ನ, 89 ಬೆಳ್ಳಿ ಹಾಗೂ 83 ಕಂಚು ಸೇರಿದಂತೆ 341 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ
20ನೇ ಆವೃತ್ತಿಯ ಏಷ್ಯನ್ ಗೇಮ್ಸ್ ಕೂಟದಲ್ಲಿ ಒಟ್ಟು 46 ದೇಶಗಳ ಕ್ರೀಡಾಪಟುಗಳು 43 ಕ್ರೀಡೆಗಳಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಿದ್ದರು.
ಪದಕ ಬೇಟೆಯಲ್ಲಿ ಚೀನಾದ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಜಪಾನ್, ದಕ್ಷಿಣ ಕೊರಿಯಾ, ಭಾರತ, ಉಜ್ಬೇಕಿಸ್ತಾನ ಹಾಗೂ ಇರಾನ್ ಇವೆ. ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಮಾತ್ರವೇ ನೂರಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದಿವೆ.
ಜಪಾನ್ ಖಾತೆಯಲ್ಲಿ 83 ಚಿನ್ನ, 95 ಬೆಳ್ಳಿ ಹಾಗೂ 91 ಕಂಚು ಸೇರಿದಂತೆ ಒಟ್ಟು 269 ಪದಕಗಳಿದ್ದರೆ, ದಕ್ಷಿಣ ಕೊರಿಯಾ 39 ಚಿನ್ನ, 43 ಬೆಳ್ಳಿ ಹಾಗೂ 68 ಕಂಚು ಸೇರಿದಂತೆ 150 ಪದಕಗಳಿವೆ. ನಂತರದ ಸ್ಥಾನಗಳಲ್ಲಿರುವ ಉಜ್ಬೇಕಿಸ್ತಾನ 70 (21 ಚಿನ್ನ, 25 ಬೆಳ್ಳಿ, 24 ಕಂಚು), ಇರಾನ್ 52 (19 ಚಿನ್ನ, 18 ಬೆಳ್ಳಿ, 15 ಕಂಚು) ಪದಕಗಳನ್ನು ಗೆದ್ದಿದೆ.









