ಮುಂಬೈ: ಮುಂಬೈ ಇಂಡಿಯನ್ಸ್ ತಂಡವು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ 54 ರನ್ ಅಂತರದ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ, ನಿಗದಿತ 20 ಓವ್ಗಳಲ್ಲಿ 7 ವಿಕೆಟ್ಗೆ 215 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಲಖನೌ 161 ರನ್ ಗಳಿಸಿ ಆಲೌಟ್ ಆಯಿತು. ಬೃಹತ್ ಗುರಿ ಬೆನ್ನತ್ತಿದ ಲಖನ್ ತಂಡ, 15 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು. ಐದು ಓವರ್ಗಳಲ್ಲಿ ಗೆಲ್ಲಲು 76 ರನ್ ಬೇಕಿತ್ತು. ಬಿರುಸಿನ ಹೊಡೆತಕ್ಕೆ
ಹೆಸರಾದ ಡೇವಿಡ್ ಮಿಲ್ಲರ್ ಮತ್ತು ಅಬ್ದುಲ್ ಸಮದ್ ಕ್ರೀಸ್ನಲ್ಲಿದ್ದರು. ಆದರೆ, 16ನೇ ಓವರ್ ಎಸೆದ ವಿಶ್ವಶ್ರೇಷ್ಠ ವೇಗಿ ಜಸ್ಪ್ರಿತ್ ಬೂಮ್ರಾ, ಪಂದ್ಯಕ್ಕೆ ತಿರುವು ನೀಡಿದರು
ಮಿಲ್ಲರ್ (24 ರನ್), ಸಮದ್ (2 ರನ್) ಹಾಗೂ ಆವೇಶ್ ಖಾನ್ (0) ಅವರ ವಿಕೆಟ್ಗಳನ್ನು ಕಬಳಿಸಿ, ಮುಂಬೈ ತಂಡಕ್ಕೆ ಸತತ ಐದನೇ ಗೆಲುವನ್ನು ಖಾತ್ರಿ ಪಡಿಸಿದರು.ಈ ತಂಡದ ಕೊನೆಯ ಆರು ವಿಕೆಟ್ಗಳು ಕೇವಲ 26 ರನ್ ಅಂತರದಲ್ಲಿ ಪತನಗೊಂಡವು.
ಮುಂಬೈ ಪರ ಪರಿಣಾಮಕಾರಿ ದಾಳಿ ಸಂಘಟಿಸಿದ ಬೂಮ್ರಾ, ನಾಲ್ಕು ಓವರ್ಗಳಲ್ಲಿ ಕೇವಲ 22 ರನ್ ನೀಡಿ ಪ್ರಮುಖ 4 ವಿಕೆಟ್ಗಳನ್ನು ಕಬಳಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಟ್ರೆಂಟ್ ಬೌಲ್ಟ್ ಮೂರು ವಿಕೆಟ್ ಉರುಳಿಸಿದರೆ, ವಿಲ್ ಜಾಕ್ಸ್ ಎರಡು ವಿಕೆಟ್ ಪಡೆದರು. ಇನ್ನೊಂದು ವಿಕೆಟ್ ಕಾರ್ಬಿನ್ ಬಾಷ್ ಪಾಲಾಯಿತು.
ಇದಕ್ಕೂ ಮೊದಲು, ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈಗೆ ಆರಂಭಿಕ ಬ್ಯಾಟರ್ ರಿಕೆಲ್ಟನ್ ಬಿರುಸಿನ ಆರಂಭ ನೀಡಿದರು. ಕಳೆದೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ತಮ್ಮ ಜೊತೆಗಾರ ರೋಹಿತ್ ಶರ್ಮಾ (12 ರನ್) ಬೇಗನೆ ವಿಕೆಟ್ ಒಪ್ಪಿಸಿದರೂ, ರನ್ ವೇಗ ತಗ್ಗಿಸದ ಅವರು, ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿ ಸಹಿತ 58 ರನ್ ಬಾರಿಸಿದರು.
ವಿಲ್ ಜಾಕ್ಸ್ 29 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು. ಆದರೆ, ತಿಲಕ್ ವರ್ಮಾ (6 ರನ್) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (5 ರನ್) ವೈಫಲ್ಯ ಅನುಭವಿಸಿದರು. ನಂತರ ಸೂರ್ಯಕುಮಾರ್ ಯಾದವ್ ಆಟ ರಂಗೇರಿತು. 28 ಎಸೆತಗಳನ್ನು ಎದುರಿಸಿದ ಅವರು ತಲಾ ನಾಲ್ಕು ಬೌಂಡರಿ, ಸಿಕ್ಸರ್ ಸಹಿತ 54 ರನ್ ಚಚ್ಚಿದರು.ಕೊನೆಯಲ್ಲಿ ನಮನ್ ಧಿರ್ (ಅಜೇಯ 25 ರನ್) ಮತ್ತು ಕಾರ್ಬಿನ್ ಬಾಷ್ (20 ರನ್) ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಟೂರ್ನಿಯಲ್ಲಿ ಆರಂಭಿಕ ಹಿನ್ನಡೆಯ ಬಳಿಕ ಚೇತರಿಸಿಕೊಂಡಿರುವ ಮುಂಬೈ, ಸತತ ಐದನೇ ಜಯ ಸಾಧಿಸಿತು. ಇದರೊಂದಿಗೆ, ಟೂರ್ನಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಆರನೇ ಗೆಲುವು ಸಾಧಿಸಿದ ಹಾರ್ದಿಕ್ ಪಾಂಡ್ಯ ಪಡೆ, ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಇಷ್ಟೇ ಪಂದ್ಯ ಗೆದ್ದು 12 ಪಾಯಿಂಟ್ ಹೊಂದಿರುವ ಗುಜರಾತ್ ಟೈಟನ್ಸ್, ಉತ್ತಮ ರನ್ರೇಟ್ ಹೊಂದಿರುವ ಕಾರಣ ಅಗ್ರಸ್ಥಾನದಲ್ಲಿ ಮುಂದುವರಿದಿದೆ.