ಸುಳ್ಯ:ಕೆವಿಜಿ ಮೆಡಿಕಲ್ ಕಾಲೇಜಿನ ಜೀವರಸಾಯನಶಾಸ್ತ್ರ (ಬಯೋಕೆಮಿಸ್ಟ್ರಿ ) ವಿಭಾಗದ ವತಿಯಿಂದ ಕಾಲೇಜಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ‘ಸ್ಥೂಲಕಾಯತೆ ಸವಾಲು:ಆರೋಗ್ಯಕರ ಭವಿಷ್ಯ ನಿರ್ಮಾಣಕ್ಕೆ ವೈಜ್ಞಾನಿಕ ಪರಿಹಾರಗಳು’ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ‘ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ’ ಮೇ 30ರಂದು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ
ಆಯೋಜಿಸಲಾಗಿದೆ ಎಂದು
ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗು ಕಾರ್ಯಕ್ರಮದ ಸಂಘಟನಾ ಸಮಿತಿಯ ಅಧ್ಯಕ್ಷ ಡಾ.ಶಿವರಾಜಶಂಕರ ವೈ.ಎಂ. ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥೂಲಕಾಯತೆ ಇಂದಿನ ಯುಗದ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಅತಿಯಾದ ಕೊಬ್ಬಿನ ಸಂಗ್ರಹದಿಂದ ದೇಹದ ತೂಕ ಹೆಚ್ಚಾಗಿ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸ್ಥಿತಿಯನ್ನು ಸ್ಥೂಲಕಾಯತೆ ಎಂದು ಕರೆಯಲಾಗುತ್ತದೆ.ಇತ್ತೀಚಿನ ಜೀವನಶೈಲಿ, ಅಸಮತೋಲನ ಆಹಾರ ಪದ್ಧತಿ, ವ್ಯಾಯಾಮದ ಕೊರತೆ, ಒತ್ತಡ ಹಾಗೂ ಜನ್ಯಕಾರಣಗಳು ಸ್ಥೂಲಕಾಯತೆಗೆ ಪ್ರಮುಖ ಕಾರಣಗಳಾಗಿವೆ. ಕಾರ್ಯಕ್ರಮದಲ್ಲಿ
ಸಮುದಾಯ ವೈದ್ಯಕೀಯ, ಜೀವರಸಾಯನಶಾಸ್ತ್ರ,
ಮಕ್ಕಳ ವೈದ್ಯಕೀಯ, ಸಾಮಾನ್ಯ ವೈದ್ಯಕೀಯ, ಸ್ತ್ರೀ ರೋಗ ಮತ್ತು ಪ್ರಸೂತಿ
ತಜ್ಞರು ಸೇರಿದಂತೆ ವಿವಿಧ ವೈದ್ಯಕೀಯ ಕ್ಷೇತ್ರಗಳ ಪರಿಣಿತರು ಸಂಪನ್ಮೂಲ
ವ್ಯಕ್ತಿಗಳಾಗಿ ಭಾಗವಹಿಸಿ ಸ್ಥೂಲಕಾಯತೆ ಸಂಬಂಧಿತ ಆರೋಗ್ಯ ಸಮಸ್ಯೆಗಳು, ಜನ್ಯ ಮತ್ತು ಚಯಾಪಚಯ ವೈಶಿಷ್ಟ್ಯಗಳು, ಮಕ್ಕಳಲ್ಲಿನ
ಸ್ಥೂಲಕಾಯತೆ, ಮಹಿಳಾ ಆರೋಗ್ಯದ ಮೇಲೆ ಅದರ ಪರಿಣಾಮ, ಪೌಷ್ಟಿಕ
ಆಹಾರ ಕ್ರಮಗಳು ಹಾಗೂ ಸ್ಥೂಲಕಾಯ ಮತ್ತು ಶ್ವಾಸಕೋಶದ
ಆರೋಗ್ಯದಲ್ಲಿ ಸೈಟೋಕೈನ್ಗಳ ಪಾತ್ರ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ
ಉದ್ಘಾಟನಾ ಸಮಾರಂಭ ಬೆಳಗ್ಗೆ 9.15ಕ್ಕೆನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ಡಾ.ನೀಲಾಂಬಿಕೈ ನಟರಾಜನ್ ಮತ್ತಿತರರು ಭಾಗವಹಿಸಲಿದ್ದಾರೆ.ದಿನಪೂರ್ತಿ ವಿವಿಧ ವೈಜ್ಞಾನಿಕ ಉಪನ್ಯಾಸಗಳು ನಡೆಯಲಿವೆ.ವೈದ್ಯಕೀಯ ವೃತ್ತಿಪರರು,ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಡಾ.ಶಿವರಾಜಶಂಕರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಕಾರ್ಯದರ್ಶಿ
ಡಾ. ಶ್ರುತಿ ರೈ, ಕೆವಿಜಿ ಮೆಡಿಕಲ್ ಕಾಲೇಜಿನ ಮೀಡಿಯಾ ಕೋಆರ್ಡಿನೇಟರ್ ಹರ್ಷಿತಾ ಬೆದ್ರುಪಣೆ ಉಪಸ್ಥಿತರಿದ್ದರು.













